ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರತಿಯೊಬ್ಬರು ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮ ಪಡಿಸಿಕೊಳ್ಳಲು ಯೋಗ ಸಹಕಾರಿಯಾಗಿದ್ದು, ದೇಹ, ಮನಸ್ಸಿನ ಸದೃಢತೆ ಹಾಗೂ ಸುಸ್ಥಿತಿ ಮತ್ತು ಮನೋಲ್ಲಾಸಕ್ಕೆ ಯೋಗ ನೆರವಾಗಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿಂದು ಭಾರತ ಸರ್ಕಾರದ ಆಯುಷ್ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸೇವಾ ಸಮಿತಿ ಹಾಗೂ ಯೋಗನಿರತ ಸಂಘಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಒತ್ತಡದ ಪರಿಸ್ಥಿತಿಯಲ್ಲಿ 30-40ನೇ ವಯಸ್ಸಿಗೆ ಸಾಕಷ್ಟು ಯುವಕ, ಯುವತಿಯರು ಹೃದಯಾಘಾತಕ್ಕೀಡಾಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಹಾಗಾಗಿ ದೈನಂದಿನ ಎಷ್ಟೇ ಒತ್ತಡವಿರಲಿ, ಯೋಗವನ್ನು ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ದಿನನಿತ್ಯ ಯೋಗ ಮಾಡುವುದರಿಂದ ಧ್ಯಾನ, ದೈಹಿಕ ವ್ಯಾಯಾಮ, ಸುಸ್ಥಿರ ಆರೋಗ್ಯ ದೊರೆಯಲಿದೆ. ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ಕಾಯಾ, ವಾಚಾ, ಮನಸ ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕರೆ ನೀಡಿದರು.ಯೋಗ ಮಾಡಲು ಹೆಚ್ಚಿಗೆ ಹಣ ಖರ್ಚಾಗುವುದಿಲ್ಲ. ಒಂದು ಮ್ಯಾಟ್ ಅಥವಾ ಶಾಲು ಇದ್ದರೆ ಸಾಕು. ಮನೆ ಅಥವಾ ಶಾಲೆಯ ಪ್ರಶಾಂತ ವಾತಾವರಣದಲ್ಲಿ ಯೋಗ ಮಾಡಬಹುದು. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ನಮ್ಮ ಆರೋಗ್ಯ, ನಮ್ಮ ಕುಟುಂಬದವರ ಹಾಗೂ ಸಮುದಾಯದ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಮಾಡುವಂತೆ ಇತರರಿಗೆ ತಿಳಿಹೇಳಬೇಕು ಎಂದರು.
ಆರೋಗ್ಯಕರ ಚಾಮರಾಜನಗರವನ್ನಾಗಿಸಲು ಪಣ ತೊಡಿ:ನಾವು ಆರೋಗ್ಯವಾಗಿದ್ದರೇ ದೇಶದ ಆರೋಗ್ಯ ಉತ್ತಮವಾಗಿರಲಿದೆ. ಚಾಮರಾಜನಗರವನ್ನು ಈಗ ಹಸಿರು ಚಾಮರಾಜನಗರ, ಚೆಲುವ ಚಾಮರಾಜನಗರ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯಕರ ಚಾಮರಾಜನಗರವನ್ನಾಗಿ ಮಾಡಲು ದಿನನಿತ್ಯ ಯೋಗ ಮಾಡುತ್ತೇವೆಂದು ಎಲ್ಲರೂ ಇಂದೇ ಪಣ ತೋಡೋಣ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಪಿ. ಸತೀಶ್ ಕುಮಾರ್, ಇತರರು ಕಾರ್ಯಕ್ರಮದಲ್ಲಿ ಇದ್ದರು.ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೇರಿದಂತೆ ಇತರೆ ಗಣ್ಯರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇತರರಲ್ಲಿ ಉತ್ಸಾಹ ತುಂಬಿದರು. ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಡಾ.ಮಧು ಭರತ್ ಅವರು ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಯೋಗ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು.
ಚಾಮರಾಜನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿದ್ದ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಉದ್ಘಾಟಿಸಿದರು.;Resize=(128,128))
;Resize=(128,128))
;Resize=(128,128))