ಸಾರಾಂಶ
ಕುವೆಂಪು ವಿವಿ ಮಟ್ಟದ ಯೋಗ ಪಂದ್ಯಾವಳಿ ಹಾಗೂ ವಿವಿ ತಂಡದ ಆಯ್ಕೆ ಕಾರ್ಯಕ್ರಮವನ್ನು ಎಸ್.ಎನ್.ನಾಗರಾಜ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಿತ್ಯ ಜೀವನದಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಯೋಗಾಭ್ಯಾಸ ಬಹು ಮುಖ್ಯವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಹೇಳಿದರು.ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಶನಿವಾರ ದೈಹಿಕ ಶಿಕ್ಷಣ ವಿಭಾಗ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಯೋಗ ಪಂದ್ಯಾವಳಿ ಹಾಗೂ ವಿವಿ ತಂಡದ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಯೋಗ ಕೇಂದ್ರವಾಗಿದ್ದು, ಇಡೀ ಜಗತ್ತಿಗೆ ಯೋಗದ ಮಹತ್ವ ಸಾರುತ್ತಿರುವ ರಾಷ್ಟ್ರವಾಗಿದೆ. ಪತಂಜಲಿ ಮಹರ್ಷಿಗಳ ಯೋಗ ಸೂತ್ರದ ಆಧಾರದ ಮೇಲೆ, ವೈಜ್ಞಾನಿಕ ತಳಹದಿಯನ್ನು ಹೊಂದಿ ವಿಶಾಲಾರ್ಥ ಹೊಂದಿದ ಯೋಗ ಪದ್ಧತಿಯಾಗಿದೆ ಎಂದು ಬಣ್ಣಿಸಿದರು.ಯೋಗ ಈಗ ವಿಶ್ವ ಮನ್ನಣೆ ಪಡೆದಿದ್ದು, ಯಾವುದೇ ಸಂಕುಚಿತ ಭಾವನೆ ಇಲ್ಲದೆ ಪ್ರತಿಯೊಬ್ಬರೂ ಉತ್ಸುಕತೆಯಿಂದ ಅನುಸರಿಸಬೇಕಾದ ಸಂಗತಿಯಾಗಿದೆ ಎಂದು ತಿಳಿಸಿದರು.
ಈ ಹಿಂದೆ ಹನುಮಂತನೂ ಸಹಿತ ಸೀಮೋಲ್ಲಂಘನ ಮಾಡಲು ಪ್ರಾಣಾಯಾಮ ಹಾಗೂ ಯೋಗದಿಂದಲೇ ಶಕ್ತಿಯನ್ನು ಪಡೆದಿದ್ದ. ಕರ್ನಾಟಕದಲ್ಲೂ ಬಿ.ವಿ.ಕೆ.ಅಯ್ಯಂಗಾರ್ ರಂಥಹ ಅನೇಕ ಯೋಗ ಸಾಧಕರನ್ನು ನಾವು ಕಾಣಬಹುದು. ಮನಸ್ಸು ಮತ್ತು ದೇಹದ ಬೀರುವ ಪರಿಣಾಮಗಳನ್ನುಯೋಗಾಭ್ಯಾಸದಿಂದ ದೂರ ಮಾಡಲು ಸಾಧ್ಯ. ವಿದ್ಯಾರ್ಥಿಗಳಿಗೆ ಯೋಗ ಬಹುಮುಖ್ಯ ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಆರ್.ಎಂ.ಜಗದೀಶ ಮಾತನಾಡಿ, ಹಲವು ವರ್ಷಗಳ ನಂತರ ಇಂಥಹ ಪಂದ್ಯಾವಳಿ ಆಯೋಜಿಸಲು ಕುವೆಂಪು ವಿಶ್ವವಿದ್ಯಾಲಯ ನಮಗೆ ಅವಕಾಶ ನೀಡಿದೆ. ಅದಕ್ಕಾಗಿ ವಿವಿಯನ್ನು ಅಭಿನಂದಿಸುತ್ತೇನೆ ಎಂದರು.
ಭಾರತ ಸಂಸ್ಕೃತಿ-ಪರಂಪರೆಯಿಂದ ಕೂಡಿದ ದೇಶ. ಬೇರೆ ಕ್ರೀಡೆಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಮನ್ನಣೆಯಂತೆ ಯೋಗ ಪಂದ್ಯಾವಳಿಗೂ ನೀಡಬೇಕು. ಯೋಗ ಮತ್ತು ಚದುರಂಗದ ಬಗ್ಗೆ ವಿಶ್ವ ವಿಜೇತ ಚದುರಂಗ ಪಟು ಗೂಕೇಶ್ ದೊಮ್ಮರಾಜು ಅವರೆ ಸಾಕ್ಷಿ ಎಂದು ಹೇಳಿದರು.ದೈಹಿಕ ಶಿಕ್ಷಣ ನಿರ್ದೇಶಕಿ ವಿದ್ಯಾಶ್ರೀ ಬಿ.ಕೆ. ಐಕ್ಯೂಎಸಿ ಸಂಯೋಜಕ ಡಾ.ಓಂಕಾರಪ್ಪ ಎ.ಪಿ. ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸ್ವಾತಿ ಸ್ವಾಗತಿಸಿದರು. ಡಾ.ಬಸವರಾಜ ಗುಬ್ಬಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ಅನ್ನಪೂರ್ಣಾ ವಂದಿಸಿದರು. 23 ಕಾಲೇಜುಗಳಿಂದ ಸುಮಾರು 125 ಯೋಗ ಸ್ಪರ್ಧಾಳುಗಳು ಭಾಗವಹಿಸಿದ್ದರು.