ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದೇಹವೆ ದೇವಾಲಯದ ಬಳಿಕ ಅನ್ಯದೇವರ ಹಂಗು ಏತಕ್ಕೆ ಎನ್ನುವ ಶರಣ ವಾಣಿಯಂತೆ, ನಾವು ದೇಹ ಮತ್ತು ಮನಸ್ಸು ಶುದ್ಧವಾಗಿರಿಸಿಕೊಳ್ಳುವಲ್ಲಿ ಯೋಗ ಮತ್ತು ಶಿವಯೋಗ ಸಹಾಯಕ್ಕೆ ಬರುತ್ತವೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ವೈದ್ಯ ಶ್ರೀ ಚೆನ್ನಬಸವಣ್ಣ ಸ್ವಾಮಿಗಳು ನುಡಿದರು.ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠ ವತಿಯಿಂದ ಅಂತರಾಷ್ಟ್ರೀಯ ಯೋಗದಿನ ಅಂಗವಾಗಿ ಏರ್ಪಡಿಸಿರುವ ಮೂರು ದಿನಗಳ ಯೋಗ ಸಂಭ್ರಮದ-2ನೇ ದಿನವಾದ ಗುರುವಾರ ಯೋಗ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ದೇಹಕ್ಕೆ ಒಳ್ಳೆಯದನ್ನು ತೆಗೆದುಕೊಳ್ಳುವುದು ಕೆಟ್ಟದ್ದನ್ನು ಹೊರಹಾಕುವುದೇ ಯೋಗದ ಗುಣಧರ್ಮ. ತನು, ಮನ ಶುಚಿಗೊಳ್ಳುವುದೇ ಬಸವಯೋಗ. ಬಸವಾದಿ ಶಿವಶರಣರು ಯೋಗ ಪ್ರವೀಣರು ಆ ಬಗ್ಗೆ ಮಾರ್ಗದರ್ಶನ ನೀಡಿ ಹೋಗಿದ್ದಾರೆ ಎಂದರು.
ಯೋಗ ಮಾಡುವುದೆಂದರೆ ಅದು ಬಾಹ್ಯ ಪ್ರದರ್ಶನವಲ್ಲ. ಬದಲಿಗೆ ಅಂತರಂಗದ ದರ್ಶನ ನಿಜವಾದ ಯೋಗದಿಂದಾಗುತ್ತದೆ. ಶ್ವಾಸದ ಮೂಲಕ ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಯೋಗ ಸಾಧನೆಯೊಂದೇ ನಿಜ ಮಾರ್ಗ. ನಮ್ಮ ಆಹಾರ ಪದ್ಧತಿಯ ಜೀವನ ಶೈಲಿಯಲ್ಲಿ ಕ್ರಮ ಬದ್ಧತೆ ರೂಢಿಸಿಕೊಂಡರೆ ಅರಿಷಡ್ವರ್ಗ ನಿರ್ವಹಿಸಿಕೊಂಡು ಆ ಮೂಲಕ ಆತ್ಮಸಾಕ್ಷಾತ್ಕಾರ ಪಡೆಯುವುದೆ ನಿಜವಾದ ಯೋಗ ಎಂದು ಪ್ರತಿಪಾದಿಸಿದರು.ಅನುಭಾವ ಎಂಬುದು ಅಂತರಂಗದ ರತ್ನ. ಯೋಗದಿಂದ ದೇಹಕ್ಕೆ ಹಂಟಿದ ಅನೇಕ ಗಂಭೀರ ಕಾಯಿಲೆಗಳು ಹತೋಟಿಯಲ್ಲಿಡಲು ಸಾಧ್ಯ. ದೇಹವನ್ನು ಶುದ್ಧಪಾತ್ರೆಯನ್ನಾಗಿಸಿ ಅನುಭಾವದ ಅಡುಗೆ ಮಾಡಬೇಕು. ನಮ್ಮ ದೇಹದ ತಲೆಯೇ ಕಾಶ್ಮೀರ, ಪಾದವೇ ಕನ್ಯಾಕುಮಾರಿ. ಈ ಮನಸ್ಸು ನೆಮ್ಮದಿ ಮತ್ತು ಶಾಂತಿಯಿಂದ ಕೂಡಿರಬೇಕಾದರೆ ನಮ್ಮಲ್ಲಿ ನಗುವಿರಬೇಕು. ಮನಸ್ಸು ಬಿಚ್ಚಿ ನಗಬೇಕು ಎಂದರು.
ನಿಂತ ನೀರು ಹೇಗೆ ಮಲಿನವಾಗುತ್ತದೆಯೋ ಹಾಗೆಯೆ ನಮ್ಮ ದೇಹದ ರಕ್ತಸಂಚಾರವು ಮಲಿನದಿಂದ ಅಶುದ್ಧತೆಗೆ ಕಾರಣವಾಗಿ ಅನೇಕ ಕಾಯಿಲೆಗಳು ಬರುತ್ತವೆ. ಹಾಗಾಗಿ ನಾವು ಉಸಿರು ಇರುವವರೆಗೂ ಶಿವ ಅಥವಾ ಚೈತನ್ಯ ಸ್ವರೂಪಿಗಳು, ಉಸಿರು ನಿಂತ ಮೇಲೆ ಶವವಾಗುತ್ತೇವೆ. ಆಯುರ್ವೇದ ಪದ್ಧತಿಯನ್ನು ಅನುಸರಿಸಿ ಹಿಂದಿನ ನಮ್ಮ ಪೂರ್ವಿಕರು 100ಕ್ಕಿಂತ ಹೆಚ್ಚುವರ್ಷಗಳ ಕಾಲ ಜೀವಿಸುತ್ತಿದ್ದರು. ಈಗ ಅದು 80, 60, ಮುಂದೆ 30 ಆಗುವ ಲಕ್ಷಣಗಳಿವೆ ಎಂದು ಶ್ರೀ ಚೆನ್ನಬಸವಣ್ಣ ಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಯೋಗದ ವಿವಿಧ ಭಂಗಿಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಹೇಳುವ ಮತ್ತು ತೋರಿಸಿಕೊಡುವ ಮೂಲಕ ಯೋಗಾಸಕ್ತರ ಗಮನಸೆಳೆದರು.
ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ಯೋಗದಿಂದ ದೇಹಕ್ಕೆ ನವಚೈತನ್ಯ ಬರುತ್ತದೆ. ವಿದ್ಯಾರ್ಥಿಗಳಿಗೆ ಯೋಗ ಒಂದು ರೀತಿಯಲ್ಲಿ ಜ್ಞಾನ ಹೆಚ್ಚಿಸುವಲ್ಲಿ ದಿವ್ಯಮಾರ್ಗವಾಗಿದೆ ಎಂದು ಪ್ರತಿಪಾದಿಸಿದರು.ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಯೋಗಾಚಾರ್ಯ ಎಲ್.ಎಸ್.ಚಿನ್ಮಯಾನಂದ ಅವರು ಉಪಸ್ಥಿತರಿದ್ದು ಚೆನ್ನಬಸವಣ್ಣ ಸ್ವಾಮೀಜಿಯವರಿಗೆ ಸಾಥ್ ನೀಡಿದರು.
ಈ ವೇಳೆ ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮಿಗಳು, ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು, ಚಿದರವಳ್ಳಿ-ಶಿರಸಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಕುಂಬಾರ ಗುರುಪೀಠದ ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮಿಗಳು ಹಾಗೂ ಲಂಬಾಣಿ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು ಮತ್ತಿತರರು ಉಪಸ್ಥಿತರಿದ್ದರು.ಶ್ರೀಮಠದ ಅಭಿಮಾನಿಗಳು, ಸಾರ್ವಜನಿಕರು, ಎಸ್‌ಜೆಎಂ ವಿದ್ಯಾಪೀಠದ ಶಾಲಾ ಕಾಲೇಜುಗಳ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.