ಸಾರಾಂಶ
ರವಿ ಮೇಗಳಮನಿಕನ್ನಡಪ್ರಭ ವಾರ್ತೆ ಹಿರೇಕೆರೂರುತಾಲೂಕಿನಾದ್ಯಂತ ಕಳೆದ ೧೫ ದಿನದಿಂದ ಮಳೆಯಾಗದೇ ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ಆದರೆ ಈಗಾಗಲೇ ಬಿತ್ತನೆ ಮಾಡಿದ ರೈತರು ಗೋಳಾಡುತ್ತಿದ್ದು, ಗೋವಿನ ಜೋಳದ ಬೆಳೆಯು ಮಳೆ ಇಲ್ಲದೆ ಬಿಸಿಲಿಗೆ ಬಾಡ ತೊಡಗಿದೆ.ಈ ವರ್ಷವಾದರೂ ಮಳೆ ಸರಿಯಾದ ವೇಳೆಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ನಿರಾಸೆಯಾಗತೊಡಗಿದೆ.ಕಳೆದ ವರ್ಷವೂ ಮಳೆ ಸರಿಯಾದ ಸಮಯಕ್ಕೆ ಬಾರದೆ ರೈತರು ಬರ ಎದುರಿಸಬೇಕಾಯಿತು.ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಬಂದು ಜನ ಜಾನುವಾರುಗಳ ಸಂಕಷ್ಟ ನಿವಾರಣೆಯಾಗಲಿದೆ ಎಂಬ ರೈತನ ನಿರೀಕ್ಷೆ ಹುಸಿಯಾಗಿದೆ. ನಿರೀಕ್ಷೆಯಷ್ಟು ಮಳೆಯಾಗದ ಹಿನ್ನೆಲೆಯಲ್ಲಿ ಎಲ್ಲ ವ್ಯಾಪಾರ-ವಹಿವಾಟುಗಳು ಕುಸಿತ ಕಾಣುತ್ತಿವೆ. ಮಳೆಗಾಲ ಪ್ರಾರಂಭವಾಗಿ 15 ದಿನಗಳಾದರೂ ಈವರೆಗೂ ಹದವಾದ ಮಳೆಯಾಗಿಲ್ಲ.
ದಿನನಿತ್ಯ ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಮೋಡ ಕವಿದ ವಾತಾವರಣವಿರುತ್ತದೆ. ಆದರೆ ಮಳೆ ಬಾರದೇ ರೈತನ ಕಣ್ಣಲ್ಲಿ ನೀರು ಬರುವಂತಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ.ಮಳೆ ಕೊರತೆ; ತಾಲೂಕಿನಲ್ಲಿ ಒಂದು ವರ್ಷಕ್ಕೆ ಸರಾಸರಿ ೮೫೬ ಮಿ.ಮೀ. ಮಳೆಯಾಗಬೇಕು ಆದರೆ ಇದುವರೆಗೆ ವಾಡಿಕೆಯಂತೆ ೨೫೬ ಮಿ.ಮೀ. ಮಳೆಯಾಗಿದೆ. ಶೇ ೨೯.೯ ಮಳೆ ಬಂದಿದೆ. ಜೂನ್ ತಿಂಗಳಲ್ಲಿ ಕೇವಲ ಶೇ ೩೯.೨ರಷ್ಟು ಮಳೆಯಾಗಿದೆ.ಮೆಕ್ಕೆಜೋಳ ೨೨೪೫೨ ಹೆಕ್ಟೇರ್, ಹತ್ತಿ ೨೧೦ ಹೆಕ್ಟೇರ್, ಶೇಂಗಾ ೧೫ ಹೆಕ್ಟೇರ್, ಸೋಯಾಬೀನ್ ೧೧೦ ಹೆಕ್ಟೇರ್, ಹೈಬ್ರಿಡ್ ಜೋಳ ಸೇರಿದಂತೆ ದ್ವಿದಳ ಧ್ಯಾನ ಬೆಳೆಯಲು ರೈತರು ಆಸಕ್ತಿ ತೋರಿಸಿದ್ದಾರೆ. ಒಟ್ಟು ಇಲ್ಲಿಯವರೆಗೂ ಶೇ ೮೦ರಷ್ಟು ಬಿತ್ತನೆಯಾಗಿದೆ.ಹಿರೇಕೆರೂರು ತಾಲೂಕಿನಲ್ಲಿ ೫೬,೦೦೦ ಹೆಕ್ಟೇರ್ ಭೂ ಪ್ರದೇಶ ಸಾಗುವಳಿ ಕ್ಷೇತ್ರವಾಗಿದ್ದು, ೪೯,೦೦೦ ಹೆಕ್ಟೇರ್ ಭೂ ಪ್ರದೇಶ ಒಣ ಬೇಸಾಯ, ೭೦೦೦ ಹೆಕ್ಟೇರ್ ಭೂ ಪ್ರದೇಶ ನೀರಾವರಿ ಬೇಸಾಯ ಆಗಿದೆ. ತಾಲೂಕಿನಲ್ಲಿ ಹೆಚ್ಚಾಗಿ ಮೆಕ್ಕೆಜೋಳ, ಜೋಳ, ಬಿತ್ತನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದರ ಜತೆಗೆ ಹತ್ತಿ, ಶೇಂಗಾ, ಸೋಯಾಬೀನ್, ಹೈಬ್ರೇಡ್ ಜೋಳ ಸೇರಿದಂತೆ ದ್ವಿದಳ ಧ್ಯಾನ ಬೆಳೆಯಲು ರೈತರು ಆಸಕ್ತಿ ತೋರಿಸಿದ್ದಾರೆ.ಕೆಲವು ಕಡೆ ರೈತರು ಕೊಳವೆಬಾವಿ ಹೊಂದಿದ್ದರೂ ವಿದ್ಯುತ್ ಸಮಸ್ಯೆಯಿಂದ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ, ವಿದ್ಯುತ್‌ಗಾಗಿ ಕಾಯುತ್ತ ಕುಳಿತಕೊಳ್ಳುವಂತಾಗಿದೆ ಎಂದು ಹೇಳುತ್ತಾರೆ.ಮಳೆಗಾಗಿ ದಿನನಿತ್ಯ ರೈತ ಮುಗಿಲು ನೋಡುತ್ತ ವರುಣನ ಅಗಮನಕ್ಕಾಗಿ ಕಾಯುತ್ತಿದ್ದಾನೆ. ಮಳೆರಾಯ ಯಾವಾಗ ಕೃಪೆ ತೋರುತ್ತಾನೋ ಎಂಬ ಅತಂಕದಲ್ಲಿ ರೈತರಿದ್ದಾರೆ.ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಶೇ. ೮೦ರಷ್ಟು ಬಿತ್ತನೆ ಕಾರ್ಯ ಮುಕ್ತಾಯವಾಗಿದೆ. ಬೆಳೆ ಸಸಿಯ ಹಂತದಲ್ಲಿದೆ. ರೈತರು ಗೋವಿನಜೋಳ ಏಡೆ ಕುಂಠಿ ಹೊಡೆಯುತ್ತಿದ್ದಾರೆ. ಆದರೆ ಮಳೆಯ ತೇವಾಂಶ ನೋಡಿಕೊಂಡು ಏಡೆ ಕುಂಠಿ ಹೊಡೆಯಬೇಕು. ಬೆಳೆ ಬಾಡಿದರೆ ಬೆಳವಣಿಗೆಯಲ್ಲಿ ಕುಂಠಿತಗೊಳುತ್ತದೆ. ರೈತರು ಬೆಳೆ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಗೌಡಪ್ಪಳವರ ಹೇಳಿದರು.ಈ ಬಾರಿ ಮಳೆ ಸರಿಯಾದ ಸಮಯಕ್ಕೆ ಬರಬಹುದು ಎಂಬ ರೈತನ ಕನಸು ನಿರಾಸೆಯಾಗತೊಡಗಿದೆ. ಸಾಲ-ಸೋಲ ಮಾಡಿ ಬಿತ್ತನೆ ಮಾಡಿರುವ ಬೆಳೆಗಳು ಒಣಗುತ್ತಿವೆ, ಮಳೆಗಾಗಿ ದಿನನಿತ್ಯ ಕಾಯುವಂತಾಗಿದೆ. ಮಳೆ ಬಾರದೆ ಹೋದರೆ ರೈತರ ಪಾಡು ದೇವರೇ ಬಲ್ಲ. ಈ ಕೂಡಲೆ ಸರ್ಕಾರ ರೈತರ ಕಡೆ ಗಮನ ಹರಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.