ಯೋಗಕ್ಕೆ ಇಂದು ವಿಶ್ವದಾದ್ಯಂತ ದೊರೆತಿರುವ ಮನ್ನಣೆ ಭಾರತದ ಋಷಿಮುನಿಗಳ ಜ್ಞಾನಕ್ಕೆ ಸಂದ ಗೌರವವಾಗಿದೆ
ಕುಷ್ಟಗಿ: ಸಮೀಪದ ನಿಡಶೇಸಿ ಕೆರೆ ದಡದಲ್ಲಿರುವ ಸಾರ್ವಜನಿಕ ಉದ್ಯಾನವನ ಯೋಗದ ನಾದದಿಂದ ಕಂಗೊಳಿಸಿತು. ಹಸಿರಿನ ಪರಿಸರ, ತಂಪಾದ ಗಾಳಿ ಮತ್ತು ಶಾಂತ ವಾತಾವರಣದ ನಡುವೆ ನೂರಾರು ಜನರು ಸಾಮೂಹಿಕವಾಗಿ ಯೋಗಾಭ್ಯಾಸ ನಡೆಸುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕಾಡಳಿತ, ತಾಪಂ, ವಕೀಲರ ಸಂಘ, ಪತಂಜಲಿ ಯೋಗ ಸಮಿತಿ ಹಾಗೂ ಇನ್ನರ್ ವೀಲ್ ಕ್ಲಬ್‌ನ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ಕೇವಲ ಯೋಗಾಭ್ಯಾಸಕ್ಕೆ ಸೀಮಿತವಾಗದೆ ಆರೋಗ್ಯಕರ ಜೀವನಶೈಲಿ, ಮಾನಸಿಕ ನೆಮ್ಮದಿ ಮತ್ತು ಪ್ರಕೃತಿಯೊಂದಿಗೆ ಮಾನವನ ಬಾಂಧವ್ಯ ಗಟ್ಟಿಗೊಳಿಸುವ ಸಂದೇಶ ಸಾರಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರೇಡ್-2 ತಹಸೀಲ್ದಾರ ರಜನಿಕಾಂತ, ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ಅದು ದೇಹವನ್ನು ಸದೃಢಗೊಳಿಸುವುದರ ಜತೆಗೆ ಮನಸ್ಸಿಗೆ ನೆಮ್ಮದಿ ಮತ್ತು ಆತ್ಮವಿಶ್ವಾಸ ನೀಡುತ್ತದೆ. ಇಂದಿನ ವೇಗದ ಬದುಕಿನಲ್ಲಿ ಮನುಷ್ಯ ಅನೇಕ ಒತ್ತಡಗಳಿಗೆ ಒಳಗಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಪ್ರತಿ ದಿನದ ಯೋಗಾಭ್ಯಾಸವೇ ಆರೋಗ್ಯಕರ ಬದುಕಿನ ಮೂಲಮಂತ್ರವಾಗಿದೆ ಎಂದರು.
ವಿರೇಶ ಬಂಗಾರಶೆಟ್ಟರ ಮಾತನಾಡಿ, ಕಳೆದ 12 ವರ್ಷಗಳಿಂದ ಪತಂಜಲಿ ಯೋಗ ಸಮಿತಿಯಿಂದ ಯೋಗ ಶಿಬಿರ ನಡೆಸಿಕೊಂಡು ಬಂದಿದ್ದು, ಈ ಶಿಬಿರ ವರ್ಷಪೂರ್ತಿ ನಡೆಯಲಿದ್ದು, ಆಸಕ್ತರಿ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.ಭರತೇಶ ಜೋಷಿ ಮಾತನಾಡಿ, ಯೋಗಕ್ಕೆ ಇಂದು ವಿಶ್ವದಾದ್ಯಂತ ದೊರೆತಿರುವ ಮನ್ನಣೆ ಭಾರತದ ಋಷಿಮುನಿಗಳ ಜ್ಞಾನಕ್ಕೆ ಸಂದ ಗೌರವವಾಗಿದೆ. ಯೋಗವು ರೋಗ ದೂರವಿಡುವುದರ ಜತೆಗೆ ಜೀವನದಲ್ಲಿ ಧನಾತ್ಮಕ ಚಿಂತನೆ ಬೆಳೆಸುವ ಶಕ್ತಿ ಹೊಂದಿದೆ ಎಂದು ಹೇಳಿದರು.
ಬಿಇಒ ಉಮಾದೇವಿ ಬಸಾಪೂರ ಮಾತನಾಡಿ, ಮಹಿಳೆಯರು, ಮಕ್ಕಳು, ಯುವಕರು ಹಾಗೂ ಹಿರಿಯ ನಾಗರಿಕರು ಪ್ರತಿದಿನ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯಕರ ಜೀವನ ನಡೆಸಬಹುದು. ಔಷಧಿಗಳಿಗಿಂತ ಉತ್ತಮ ಜೀವನಶೈಲಿಯೇ ಆರೋಗ್ಯದ ಗುಟ್ಟು ಎಂಬುದನ್ನು ಯೋಗ ಸಾಬೀತುಪಡಿಸಿದೆ ಎಂದು ತಿಳಿಸಿದರು.ಯೋಗ ತರಬೇತಿದಾರರ ಮಾರ್ಗದರ್ಶನದಲ್ಲಿ ಸೂರ್ಯ ನಮಸ್ಕಾರ, ವಿವಿಧ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನಾಭ್ಯಾಸ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಮರೇಗೌಡ ಜಾಲಿಹಾಳ, ಕುಮಾರ ಬಡಿಗೇರ, ಭೀಮನಗೌಡ ಜಾಲಿಹಾಳ, ಮಹಾಂತಯ್ಯ ಅರಳೇಲಿಮಠ, ಅಪ್ಪಣ್ಣ ನವಲಿ, ಗಣೇಶ ಗುಡ್ಡದ, ಲತಾ ಸ್ಥಾವರಮಠ, ಶಿವಲೀಲಾ ಡಾವಣಗೇರ, ಭಾರತಿ ಶೆಟ್ಟಿ, ಕುಸುಮಕ್ಕ ಶ್ಯಾಟಿ, ಸುಮಾ, ಕಸ್ತೂರಿ, ಅಮೃತಾ ಕಂದಕೂರು, ಸಿದ್ದಪ್ಪ ಕಾತರಕಿ, ಶರಣಪ್ಪ ಜಿಗೇರಿ, ಮಹಾದೇಪ್ಪ ಮಹಾಲಿಂಗಪೂರ, ನಾಗಪ್ಪ ಬಿಳಿಯಪ್ಪನವರ, ಎಚ್.ಆರ್. ನಾಯಕ, ಎಸ್.ಎನ್.ಗೋಡಿ ವಕೀಲರು, ಶಶಿಧರ ಶೆಟ್ಟರ, ಶರಣಪ್ಪ ಲಿಂಗಶೆಟ್ಟರ, ಶಶಿಕಲಾ ಕುಡತಿನಿ, ಅಶ್ವಿನಿ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಪತಂಜಲಿ ಯೋಗ ಸಮಿತಿಯ ಸದಸ್ಯರು, ಇನ್ನರ್ ವೀಲ್ ಕ್ಲಬ್ ಸದಸ್ಯೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.