ಭಟ್ಕಳ ಮಣ್ಕುಳಿ ನಾಗಮಾಸ್ತಿ ಕ್ಷೇತ್ರದಲ್ಲಿ ಯೋಗ ಶಿಕ್ಷಕರ ತರಬೇತಿಗೆ ಚಾಲನೆ
ಕನ್ನಡಪ್ರಭ ವಾರ್ತೆ ಭಟ್ಕಳಮಣ್ಕುಳಿಯ ನಾಗಮಾಸ್ತಿ ಕ್ಷೇತ್ರದ ಆವರಣದಲ್ಲಿ ಸ್ಥಳೀಯ ಪತಂಜಲಿ ಯೋಗ ಪರಿವಾರ, ರಾಜ್ಯ ಪ್ರಭಾರಿ ಅಂತರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಯೋಗ ಶಿಕ್ಷಕರ 23 ದಿನಗಳ ತರಬೇತಿ ಶಿಬಿರಕ್ಕೆ ಪತಂಜಲಿ ಕಿಸಾನ್ ಸಂಘಟನೆಯ ರಾಜ್ಯ ಪ್ರಭಾರಿ ಸಂಜಯ್ ಗುತ್ತೇದಾರ್ ತುಳಸಿ ಗಿಡಕ್ಕೆ ನೀರೆರೆಯುವುದರ ಮೂಲಕ ಚಾಲನೆ ನೀಡಿದರು.
ಮುಖ್ಯಅತಿಥಿಯಾಗಿದ್ದ ಡಿವೈಎಸ್ಪಿ ಎಂ. ಗಿರೀಶ್ ಮಾತನಾಡಿ, ಯೋಗದಿಂದ ರೋಗ ಮುಕ್ತಿ ಪಡೆಯಬಹುದು. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಯೋಗ ಪ್ರತಿ ವ್ಯಕ್ತಿಗಳಿಗೂ ಅತ್ಯಗತ್ಯ. ಚಿಕ್ಕವರಿಂದ ವಯೋವೃದ್ದರವರಿಗೆ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವುದರ ಮೂಲಕ ಸ್ವಸ್ಥ ಹಾಗೂ ಸ್ವಚ್ಛ ಜೀವನವನ್ನು ನಡೆಸಲು ಸಾಧ್ಯ. ಯೋಗ ದಲ್ಲಿ ಇಂದು ಜಗತ್ತಿನ ವಿವಿಧ ದೇಶಗಳಿಗೆ ಭಾರತ ದೇಶವೇ ಮಾದರಿಯಾಗಿರುತ್ತದೆ. ಎಂದರು.ಉದ್ಯಮಿ ಹಾಗೂ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ಟ್ರಸ್ಟಿ ನಾಗೇಶ್ ಭಟ್ ಮಾತನಾಡಿ, ಯೋಗನ್ನು ಅಳವಡಿಸಿಕೊಂಡವರು ನಿರೋಗಿಗಳಾಗಿರುತ್ತಾರೆ. ಯೋಗ ವ್ಯಕ್ತಿಗತ ಆರೋಗ್ಯದೊಂದಿಗೆ ಸಮಾಜದ ಸ್ವಾಸ್ಥ್ಯಕ್ಕೂ ಕಾರಣವಾಗುವುದು. ಜಗತ್ತು ಯೋಗದಿಂದಾಗಿ ಭಾರತವನ್ನ ವಿಶ್ವಗುರು ಎಂದು ಒಪ್ಪಿಕೊಂಡಿದೆ. ಯೋಗದ ಮಹತ್ವವನ್ನ ಮುಂದುವರಿದ ರಾಷ್ಟ್ರಗಳೂ ಅರಿತುಕೊಂಡು ಅಳವಡಿಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ನಾಗ ಮಾಸ್ತಿ ಕ್ಷೇತ್ರದ ಅಧ್ಯಕ್ಷ ಶ್ರೀ ಸತೀಶ್ ಕುಮಾರ್ ಯೋಗದ ಮಹತ್ವದ ಕುರಿತು ವಿವರಿಸಿದರು. ಭಟ್ಕಳದಲ್ಲಿ ಯೋಗ ತರಬೇತಿಗಾಗಿ ಕೆಲವು ದಶಕಗಳ ಕಾಲ ಶ್ರಮಿಸಿದ ಹಿರಿಯ ಯೋಗಪಟು ವಿಠ್ಠಲ್ ಬಾಳೇರಿ ಅವರನ್ನು ಗೌರವಿಸಲಾಯಿತು. ಗೋವಿಂದ ಗುರೂಜಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಶ್ರೀನಾಥ್ ಗೌಡ, ಪತಂಜಲಿ ಜಿಲ್ಲಾ ಪ್ರಭಾವಿ ರಘುರಾಮ್ ಹೆಗಡೆ, ರಾಜ್ಯ ಪತಂಜಲಿ ಸದಸ್ಯ ನಾಗೇಂದ್ರ ಭಟ್ ಮೊದಲಾದವರಿದ್ದರು. ನೂರಾರು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಥಮ ದಿನದ ತರಬೇತಿ ಪಡೆದರು.