ಕಾರಟಗಿ: ನಗರದ ಪ್ರಮುಖ ವಿದ್ಯಾಸಂಸ್ಥೆ ಕಮ್ಮವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.ವಿದ್ಯಾರ್ಥಿಗಳಲ್ಲಿ ದೈಹಿಕ ಶಕ್ತಿ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುವ ಸದಾಶಯದೊಂದಿಗೆ, ಕಳೆದ ಒಂದು ವಾರದಿಂದ ಶಾಲೆಯಲ್ಲಿ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪತಂಜಲಿ ಯೋಗ ಸಂಸ್ಥೆಯ ತರಬೇತುದಾರ ಚಿಟ್ಟೂರಿ ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಸತತವಾಗಿ ಯೋಗದ ವಿವಿಧ ಆಸನಗಳು ಮತ್ತು ಪ್ರಾಣಾಯಾಮದ ತರಬೇತಿ ನೀಡಿದ್ದರು. ಈ ಯಶಸ್ವಿ ಒಂದು ವಾರದ ಯೋಗ ಶಿಬಿರದ ಮುಕ್ತಾಯದ ಅಂಗವಾಗಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಯೋಗದ ಪಾತ್ರ ಅಪಾರವಾಗಿದೆ. ಯೋಗವು ಕೇವಲ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಮಾನಸಿಕ ನೆಮ್ಮದಿಯನ್ನು ವೃದ್ಧಿಸುತ್ತದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಗವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ತಮ್ಮ ದಿನನಿತ್ಯದ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಸ್ತುಬದ್ಧವಾಗಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಆಡಳಿತಾಧಿಕಾರಿ ಶ್ರೀಮನ್ ನಾರಾಯಣ, ಐಸಿಎಸ್‌ಸಿ ವಿಭಾಗದ ಪ್ರಾಂಶುಪಾಲ ಮುರಳೀಕೃಷ್ಣ, ಪ್ರಾಚಾರ್ಯ ಡಾ. ಮಹಮ್ಮದ್ ರಫೀಕ್, ಕೆಎಸ್‌ಎಸ್ ಸಂಸ್ಥೆಯ ಸಂಯೋಜಕಿ ಶ್ರೀದೇವಿ ಕೊಲ್ಲಾ ಉಪಸ್ಥಿತರಿದ್ದರು.