ಯೋಗವು ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆ: ವಾಸುದೇವಸ್ವಾಮಿ

| Published : Jun 21 2024, 01:03 AM IST

ಸಾರಾಂಶ

ಜೂ. 21ರಂದು ನಡೆಯಲಿರುವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರದಲ್ಲಿ ಯೋಗ ಜಾಗೃತಿ ಜಾಥಾ ನಡೆಯಿತು. ತಾಲೂಕಿನ ವಿವಿಧ ಶಾಲೆಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಲಕ್ಷ್ಮೇಶ್ವರ: ಜಗತ್ತಿಗೆ ಭಾರತವು ನೀಡಿದ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವು ಕೂಡ ಒಂದು ಎಂದು ಲಕ್ಷ್ಮೇಶ್ವರ ತಹಸೀಲ್ದಾರ್ ವಾಸುದೇವಸ್ವಾಮಿ ಹೇಳಿದರು.

ಲಕ್ಷ್ಮೇಶ್ವರ ತಾಲೂಕು ಆಡಳಿತ, ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ‍್ಯಾಲಯ, ಯೋಗ ಸಮಿತಿ ಹಾಗೂ ಸ್ಥಳೀಯ ಶಾಲೆಗಳ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಯೋಗ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು. ಇಂದು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಯೋಗವನ್ನು ಆರೋಗ್ಯ ಜೀವನದ ಅವಿಭಾಜ್ಯ ಭಾಗವಾಗಿ ನೋಡಲಾಗುತ್ತಿದೆ. ಯೋಗದ ತವರು ನೆಲವಾಗಿರುವ ಭಾರತದಲ್ಲಿ ಯೋಗದ ಮಹತ್ವವನ್ನು ನಾವೆಲ್ಲ ಅರಿತು ಆಚರಿಸಬೇಕಾಗಿದೆ ಎಂದು ಹೇಳಿದರು.

ಪ್ರಾಚೀನ ಭಾರತೀಯರು ಪ್ರತಿನಿತ್ಯ ಯೋಗವನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಆರೋಗ್ಯಯುತ ಜೀವನ ನಡೆಸುತ್ತಿದ್ದರು. ಯೋಗದಿಂದ ಭಾರತೀಯರು ದೀರ್ಘಾಯುಷಿಗಳಾಗಿ ಜೀವನ ಸಾಗಿಸುತ್ತಿದ್ದರು ಎಂಬುದು ಅಧ್ಯಯನಗಳಿಂದ ತಿಳಿದು ಬರುತ್ತಿದೆ. ಯೋಗವು ಮನುಷ್ಯನಿಗೆ ಅತಿ ಅವಶ್ಯವಾಗಿದೆ. ಯಾವುದೇ ಖರ್ಚು ಇಲ್ಲದೆ ಕೇವಲ ಯೋಗ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವೆಂದು ಭಾರತೀಯ ಯೋಗಪಟುಗಳು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ, ಆದ್ದರಿಂದ ಜೂ. 21ರಂದು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಲಕ್ಷ್ಮೇಶ್ವರ ಪಟ್ಟಣದ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ವತಿಯಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗದ ಕುರಿತಾದ ಘೋಷಣಾ ಫಲಕಗಳೊಂದಿಗೆ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಜೂ. 21ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಜಾಗೃತಿ ಮೂಡಿಸಿದರು.

ಪ್ರೌಢವಿಭಾಗದ ಬಿ.ಆರ್.ಪಿ. ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜೂ. ೨೧ರಂದು ಲಕ್ಷ್ಮೇಶ್ವರ ಪಟ್ಟಣದ ಎಲ್ಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಆಯ್ದ ವಿದ್ಯಾರ್ಥಿಗಳ ಬೃಹತ್ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಲಾ ಸಂಘಗಳ ಪದಾಧಿಕಾರಿ ಎಸ್.ಡಿ. ಲಮಾಣಿ, ಎಚ್.ಎಂ. ಗುತ್ತಲ, ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ, ಐ.ಬಿ. ಜಕ್ಕನಗೌಡ್ರ, ಎಸ್.ಎಸ್. ಜಿರಂಕಳ್ಳಿ, ಡಿ.ಎನ್. ದೊಡ್ಡಮನಿ, ಕೆ.ಡಿ. ಕಗ್ಗಲಗೌಡ್ರು, ಎಸ್.ಎಸ್. ಉಪ್ಪಿನ, ಬಿ.ಐ.ಇ. ಆರ್.ಟಿ. ನಾಗರಾಜ ಮಜ್ಜಿಗುಡ್ಡ, ಯೋಗ ಸಾಧಕ ಸಮಿತಿಯ ಬಸವರಾಜ ಸಂಗಪ್ಪಶೆಟ್ರ, ನಾಗರಾಜ ಸೂರಣಗಿ ಹಾಗೂ ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಸಹಶಿಕ್ಷಕರು ಮತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಲಕ್ಷ್ಮೇಶ್ವರ ಉತ್ತರ ವಲಯದ ಸಿ.ಆರ್.ಪಿ. ಉಮೇಶ ನೇಕಾರ ಕಾರ್ಯಕ್ರಮ ನಿರೂಪಿಸಿದರು. ಉರ್ದು ಸಿ.ಆರ್.ಪಿ. ಎನ್.ಎ. ಮುಲ್ಲಾ ವಂದಿಸಿದರು.