ಇಂದಿನ ಒತ್ತಡದ ಜೀವನಶೈಲಿಯಲ್ಲಿ ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಅತ್ಯುತ್ತಮ ಸಾಧನವಾಗಿದೆ ಎಂದು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಹಾಗೂ ತಾ.ಪಂ. ಮಾಜಿ ಉಪಾಧ್ಯಕ್ಷ ಕೇದಾರಪ್ಪ ಭಗಾಡೆ ಹೇಳಿದರು.

ಶಿಗ್ಗಾಂವಿ: ಇಂದಿನ ಒತ್ತಡದ ಜೀವನಶೈಲಿಯಲ್ಲಿ ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಅತ್ಯುತ್ತಮ ಸಾಧನವಾಗಿದೆ ಎಂದು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಹಾಗೂ ತಾ.ಪಂ. ಮಾಜಿ ಉಪಾಧ್ಯಕ್ಷ ಕೇದಾರಪ್ಪ ಭಗಾಡೆ ಹೇಳಿದರು.

ಶಿಗ್ಗಾಂವಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಾಮದೇವ ಸಿಂಪಿ ಸಮಾಜದ ಸಂಯುಕ್ತಾಶ್ರಯದಲ್ಲಿ ಭಾನುವಾರ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರೂ ಪ್ರತಿದಿನ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು. ಯೋಗವು ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದ್ದು, ಇದರ ಮಹತ್ವವನ್ನು ಯುವ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮವನ್ನು ವಿವಿಧ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಮಾಜದ ಬಾಂಧವರು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಯೋಗದ ಮಹತ್ವ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿವು ಪಡೆದುಕೊಂಡರು.

ಯೋಗ ತರಬೇತುದಾರ ಕುಬೇರಪ್ಪ ಬಂಡಿವಡ್ಡರ ಅವರು ಮಾತನಾಡಿ, ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಆಗುವ ಪ್ರಯೋಜನಗಳು, ವಿವಿಧ ಮುದ್ರೆಗಳ ವಿಶೇಷತೆಗಳು ಹಾಗೂ ಅವುಗಳ ಉಪಯೋಗಗಳ ಕುರಿತು ವಿವರವಾಗಿ ತಿಳಿಸಿದರು. ಅಲ್ಲದೇ ಎಲ್ಲರೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಸುರೇಶ್ ಮೂಳೆ, ಸುನಿಲ್ ಮಾಳವಾದೆ, ಮಂಜುನಾಥ ಗಂಜಿಗಟ್ಟಿ, ಕೃಷ್ಣ ಮೂಳೆ, ದಾಮೋದರ ಮಾಳವಾದೆ, ಪ್ರಕಾಶ್ ಆತಡ್ಕರ್, ಪ್ರಕಾಶ್ ಮೀರಜ್ಕರ್, ಅಮಿತ್ ಗಂಜಿಗಟ್ಟಿ ಹಾಗೂ ಮಹಿಳಾ ಸದಸ್ಯೆಯರಾದ ರೂಪಾ ಬಗಾಡೆ, ಅಶ್ವಿನಿ ಗಂಜಿಗಟ್ಟಿ, ಕಾವ್ಯಾ ಬಗಾಡೆ, ಶ್ರದ್ಧಾ ಗಂಜಿಗಟ್ಟಿ, ರೂಪಾ ಮಾಳವಾದೆ, ಅನುರಾಧಾ ಗಂಜಿಗಟ್ಟಿ, ಮಮತಾ ಮಾಳವಾದೆ, ರೇಣುಕಾ, ಸರೋಜಾ ಗಂಜಿಗಟ್ಟಿ, ನೇತ್ರಾ ಮೂಳೆ ಸೇರಿದಂತೆ ಸಮಾಜದ ಅನೇಕ ಸದಸ್ಯರು ಉಪಸ್ಥಿತರಿದ್ದರು.

ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಕಾರ್ಯಕ್ರಮವು ಸಾರಿತು, ಯೋಗದಿಂದ ರೋಗಗಳನ್ನು ದೂರವಿರಿಸೋಣ ಎಂಬ ಸಂದೇಶದೊಂದಿಗೆ ನಾಮದೇವ ಸಿಂಪಿ ಸಮಾಜ, ಶಿಗ್ಗಾಂವಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಸಮಾಜದ ಮುಖಂಡರಾದ ಪ್ರಕಾಶ್ ಔಂದಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.