ಗದಗ: ಮಹಿಳೆಯರ ಅನೇಕ ಕಾಯಿಲೆ ನಿವಾರಣೆಗೆ ಯೋಗ ಒಂದು ಮಹಾಮದ್ದು ಎಂದು ತೋಂಟದಾರ್ಯ ಪ್ರೌಢಮಿಕ ಶಾಲಾ ಶಿಕ್ಷಕಿ ಸುಮಾ ಬಿ. ಹಿಟಬುತ್ತಿ ತಿಳಿಸಿದರು.
ಇಲ್ಲಿಯ ಸಿದ್ಧಲಿಂಗ ನಗರದ ಎಸ್‌ವೈಬಿಎಂಎಸ್ ಯೋಗ ಪಾಠಶಾಲೆಯ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಬಸವ ಯೋಗ ಮಂದಿರದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಹಿಳೆಯರಿಗಾಗಿ ಆಯೋಜಿಸಿದ್ದ ಯೋಗ ಅರಿವು- ಆಚಾರ ಶಿಬಿರದ ಪ್ರಾರಂಭೋತ್ಸವದಲ್ಲಿ ಮಾತನಾಡಿದರು.ಸಾಮಾನ್ಯವಾಗಿ ಮಹಿಳೆಯರನ್ನು ಮುಟ್ಟಿನ ದೋಷ, ಪ್ರಸವ ವೇದನೆ, ಬಂಜೆತನ, ಮಾನಸಿಕ ಖಿನ್ನತೆ, ಇನ್ನಿತರೆ ಮನೋ ದೈಹಿಕ ವ್ಯಾದಿ, ಮಾನಸಿಕ ಒತ್ತಡ, ಬೊಜ್ಜು ಹೀಗೆ ಹಲವು ಕಾಯಿಲೆಗಳು ಕಾಡುತ್ತಿವೆ. ಈ ಎಲ್ಲ ಕಾಯಿಲೆಗಳ ನಿವಾರಣೆಗೆ ಸಾಕಷ್ಟು ಬಗೆಯ ಔಷಧಿಗಳು ಇದ್ದರೂ ರೋಗ ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗುವುದಿಲ್ಲ. ಆದರೆ ಯೋಗ ಪ್ರಕ್ರಿಯೆಗಳಲ್ಲಿ ಬರುವ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಹಿಳೆಯರ ಕಾಯಿಲೆಗಳಿಗೆ ಪರಿಣಾಮಕಾರಿ ಪರಿಹಾರೋಪಾಯಗಳಾಗಿವೆ. ಹೀಗಾಗಿ ಮಹಿಳೆಯರ ಅನೇಕ ಕಾಯಿಲೆ ನಿವಾರಣೆಗೆ ಯೋಗವು ಒಂದು ಮಹಾಮದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಯೋಗಾಭ್ಯಾಸ ಸೀಮಿತವಾಗಬಾರದು. ಯೋಗಾಭ್ಯಾಸವನ್ನು ನಿತ್ಯ ನಿರಂತರವಾಗಿ ಮಾಡಿದರೆ ಮಾತ್ರ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಧ್ಯೇಯವಾಣಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಸಾರ್ಥಕವಾಗುವುದು. ಯೋಗಾಭ್ಯಾಸವನ್ನು ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಡ್ಡಾಯಗೊಳಿಸಿದರೆ ನಮ್ಮ ದೇಶ ಆರೋಗ್ಯವಂತ ಭಾರತ ಸಶಕ್ತ ಭಾರತವಾಗುವಲ್ಲಿ ಸಂದೇಹವಿಲ್ಲ ಎಂದರು.ಈ ವೇಳೆ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಹಿರಿಯ ಸದಸ್ಯರಾದ ಪಾರ್ವತಿ ಭೂಮಾ, ಗಿರಿಜಾ ಅಂಗಡಿ, ಅರುಣಾ ಇಂಗಳ್ಳಿ, ಯೋಗ ಶಿಕ್ಷಕಿ ಜಯಶ್ರೀ ದಾವಣಗೇರಿ ಸೇರಿದಂತೆ ಇತರರು ಇದ್ದರು. ಸುನಂದಾ ಜ್ಯಾನೋಪಂತರ ಪ್ರಾರ್ಥಿಸಿದರು. ವಿಜಯಾ ಚನ್ನಶೆಟ್ಟಿ ಸ್ವಾಗತಿಸಿದರು. ಪ್ರತಿಭಾ ಇನಾಮತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ಕಡಗದ ನಿರೂಪಿಸಿದರು. ಜಯಶ್ರೀ ವಸ್ತ್ರದ ವಂದಿಸಿದರು.