ವಿಶ್ವ ಶಾಂತಿಗೆ ಯೋಗವೇ ಮಂತ್ರ: ಯೋಗರತ್ನ ಶಾಂತಲಿಂಗೇಶ್ವರ ಶ್ರೀ

| Published : May 20 2024, 01:38 AM IST

ವಿಶ್ವ ಶಾಂತಿಗೆ ಯೋಗವೇ ಮಂತ್ರ: ಯೋಗರತ್ನ ಶಾಂತಲಿಂಗೇಶ್ವರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ಮಾಚೋಹಳ್ಳಿ ಅರಿವಿನ ಮಂದಿರದ ಕಾಂತರಾಜ ಗುರುಗಳ ಶಿಷ್ಯರಾದ ರಾಶಿ ಯೋಗ ಬಳಗ, ಮಾಲೂರಿನ ವಿವೇಕಾನಂದ ಯೋಗ ಬಳಗ, ಪುರಾತನ ಸಂಸ್ಕಾರ ಶಿಬಿರದ ಯೋಗಪಟುಗಳು, ನೆಲಮಂಗಲ ಮಹಿಳಾ ಬಳಗ, ಸಮಾಧಾನದ ಶಿಷ್ಯ ಮಂಡಳಿ ಹಾಗೂ ಕೆರೆಕತ್ತಿಗನೂರು, ಕೆಂಕೆರೆಪಾಳ್ಯ, ಕುದೂರು ಮುಂತಾದ ಸುತ್ತಮುತ್ತಲ ಗ್ರಾಮಸ್ಥರು ಯೋಗಾಭ್ಯಾಸ ನಡೆಸಿದರು.

ದಾಬಸ್‌ಪೇಟೆ: ಯೋಗ ಎಂಬುದು ಮಾನಸಿಕ ಹಾಗೂ ಶಾರೀರಿಕ ಆರೋಗ್ಯದ ಸೂತ್ರ ಅಷ್ಟೇಯಲ್ಲದೇ ಇಂದಿನ ದ್ವೇಷಮಯ ವಾತಾವರಣಕ್ಕೆ ಯೋಗವು ಶಾಂತಿಯ ಮಂತ್ರವಾಗಿ ಕೆಲಸ ಮಾಡುತ್ತದೆ ಎಂದು ಯೋಗರತ್ನ ಮೌನ ತಪಸ್ವಿ ಜಡೆಯ ಶಾಂತಲಿಂಗೇಶ್ವರ ಶಿವಯೋಗಿಗಳು ತಮ್ಮ ಲಿಖಿತ ಸಂದೇಶದಲ್ಲಿ ತಿಳಿಸಿದರು.ಸೋಂಪುರ ಹೋಬಳಿಯ ಕೆರೆಕತ್ತಿಗನೂರಿನ ಸಮಾಧಾನ ಆಶ್ರಮದಲ್ಲಿ ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಶ್ರೀ ಗುರುದೇವ ಸೇವಾಸಂಸ್ಥೆ ಹಾಗೂ ಭಾರತ ಸರ್ಕಾರದ ಮುರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥಾನದ ಸಹಯೋಗದಲ್ಲಿ ‘ಮಹಿಳಾ ಸಬಲೀಕರಣಕ್ಕಾಗಿ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ತಮ್ಮ ಲಿಖಿತ ಸಂದೇಶವನ್ನು ನೀಡಿದರು.ತುಮಕೂರು ಹಿರೇಮಠ ಹಾಗೂ ತಪೋವನದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವ್ಯಸನ ನಮ್ಮಿಂದ ಖರ್ಚು ಮಾಡಿಸುತ್ತದೆ. ಆದರೆ ಆಸನ ನಮ್ಮಿಂದ ಖರ್ಚು ಮಾಡಿಸುವುದಿಲ್ಲ. ನಮಗೆ ಗುರುತಿಲ್ಲದಿರುವುದನ್ನು ಗುರುತಿಸುವವನೇ ಗುರು. ಶಿಷ್ಯರ ಆರೋಗ್ಯ ಚನ್ನಾಗಿ ಇರಬೇಕೆಂದು ಅರಿತ ಗುರು ಇದನ್ನೆಲ್ಲಾ ಮಾಡುತ್ತಿದ್ದಾರೆ. ಇದು ಎಲ್ಲರೂ ಅನುಕರಿಸಬೇಕಾದ ಕಾರ್ಯ ಎಂದರು.ಜಡೆ - ಬಂಕಸಾಣ ಸಮಾಧಾನ ಹಿರೇಮಠದ ಘನಬಸವ ಶ್ರೀಗಳು, ಕುಮಾರ ಆಯುರ್ವೇದ ಆಶ್ರಮದ ಡಾ ಹನುಮಂತಪ್ಪ, ಜ್ಞಾನಭಾರತಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಸಿದ್ದಪ್ಪ, ಬಳ್ಳಾರಿ ಜಿಲ್ಲಾ ಆಯುಷ್ ಇಲಾಖೆಯ ಜಿಲ್ಲಾಧಿಕಾರಿ ಡಾ. ಸುಜಾತಾ ಪಾಟೀಲ ಮಾತನಾಡಿದರು.ವಿವಿಧ ಯೋಗ ಬಳಗಗಳು ಭಾಗಿ: ಕಾರ್ಯಕ್ರಮದಲ್ಲಿ ಮಾಚೋಹಳ್ಳಿ ಅರಿವಿನ ಮಂದಿರದ ಕಾಂತರಾಜ ಗುರುಗಳ ಶಿಷ್ಯರಾದ ರಾಶಿ ಯೋಗ ಬಳಗ, ಮಾಲೂರಿನ ವಿವೇಕಾನಂದ ಯೋಗ ಬಳಗ, ಪುರಾತನ ಸಂಸ್ಕಾರ ಶಿಬಿರದ ಯೋಗಪಟುಗಳು, ನೆಲಮಂಗಲ ಮಹಿಳಾ ಬಳಗ, ಸಮಾಧಾನದ ಶಿಷ್ಯ ಮಂಡಳಿ ಹಾಗೂ ಕೆರೆಕತ್ತಿಗನೂರು, ಕೆಂಕೆರೆಪಾಳ್ಯ, ಕುದೂರು ಮುಂತಾದ ಸುತ್ತಮುತ್ತಲ ಗ್ರಾಮಸ್ಥರು ಯೋಗಾಭ್ಯಾಸ ನಡೆಸಿದರು.ಗೊಗ್ಗೇಹಳ್ಳಿ ಪಂಚಮಠ ಸಂಸ್ಥಾನದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಣ್ಣ ಕೈಗಾರಿಕೆ ಇಲಾಖೆಯ ಮುಖ್ಯ ವ್ಯವಸ್ಥಾಪಕ ರಮೇಶ ದೇಸಾಯಿ, ಆಯುಷ್ ಇಲಾಖೆಯ ಡಾ. ಗುರುಬಸವ ಉಪಸ್ಥಿತರಿದ್ದರು.