ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಸುದೈವ ಕುಟುಂಬಕಂ ಎಂದು ನಂಬಿರುವ ಭಾರತ ದೇಶ ಪ್ರಪಂಚಕ್ಕೆ ನೀಡಿರುವ ಶಕ್ತಿ ಯೋಗ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತ ಸರ್ಕಾರ, ಆಯುಷ್ ಮಂತ್ರಾಲಯ, ಕನಾಟಕ ಸರ್ಕಾರ, ಜಿಲ್ಲಾಡಳಿತ, ಶಿವಮೊಗ್ಗ ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತ ಬೋಧನಾ ಆಸ್ಪತ್ರೆ ಇವರ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಿಗೂ ಶಾಂತಿ, ನೆಮ್ಮದಿ ದೊರಕಬೇಕು ಎಂದು ಬಯಸುವ ನಮ್ಮ ದೇಶ ಪ್ರಪಂಚಕ್ಕೆ ಒಳ್ಳೆಯ ಸಂಗತಿಗಳನ್ನು ನೀಡುವ ಕೆಲಸ ಮಾಡುತ್ತಾ ಬಂದಿದೆ. ನಮ್ಮ ದೇಶ ಪ್ರಪಂಚಕ್ಕೆ ಯೋಗವನ್ನು ನೀಡುವ ಮೂಲಕ ಶಕ್ತಿ ತುಂಬಿದೆ. ಕೊರೊನಾದಂತಹ ವೇಳೆಯಲ್ಲಿ ನಮ್ಮ ದೇಶ ಇತರೆ ದೇಶಗಳಿಗೆ ಲಸಿಕೆಯನ್ನು ಹಂಚಿದ್ದು, ಇದೇ ರೀತಿ ಉತ್ತಮ ಅಂಶಗಳನ್ನು ನೀಡುತ್ತಾ ಬಂದಿದ್ದೇವೆ. ಮುಂದಿನ ವರ್ಷ ಯೋಗ ದಿನಾಚರಣೆಗೂ ಮುನ್ನ ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯನ್ನು ಏರ್ಪಡಿಸುವ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಇಂದು 190ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ದಿನ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನೆಯಲ್ಲಿಡುವ ಯೋಗವನ್ನು ನಾವೆಲ್ಲರೂ ಅಭ್ಯಾಸ ಮಾಡಬೇಕು. ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಪರಂಪರೆ, ನಮ್ಮ ನಂಬಿಕೆಗಳು ಉಳಿಯಬೇಕು. ಇಂತಹ ಸಂಸ್ಕೃತಿಯನ್ನು ನಾವು ವಿಶ್ವಕ್ಕೆ ಹಂಚುತ್ತಿದ್ದೇವೆ. ನಮ್ಮ ಪ್ರಧಾನಿಯವರು ಇಂದು ಕೊಲ್ಕತ್ತಾ ದಲ್ಲಿ 1 ಲಕ್ಷಕ್ಕೂ ಅಧಿಕ ಜನರೊಂದಿಗೆ ಯೋಗಾಭ್ಯಾಸ ಮಾಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಮಾತನಾಡಿ, ಯೋಗ ಭಾರತದ ಶಕ್ತಿ. ಹಾಗೂ ನಾವು ಪ್ರಪಂಚಕ್ಕೆ ನೀಡದೆ ಕೊಡುಗೆ. ಇಂತಹ ಪ್ರಾಚೀನ ವಿಜ್ಞಾನವನ್ನು ಕೊಡುಗೆ ನೀಡಿರುವುದು ಹೆಮ್ಮೆಯ ವಿಷಯವಾಗಿದ್ದು, ಇದು ಎಲ್ಲರ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಯೋಗಾಭ್ಯಾಸ ಮಾಡಲು ಯಾವುದೇ ಖರ್ಚು ಇಲ್ಲ. ಮನೆಯಲ್ಲಿಯೇ ಎಲ್ಲ ವಯೋಮಾನದವರು ಮಾಡಬಹುದು. ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ ಯೋಗಾಭ್ಯಾಸ ಮಾಡಿಸಿದರೆ ಸದೃಢ ಮಕ್ಕಳನ್ನು ಸಿದ್ಧಪಡಿಸಬಹುದು. ನಮ್ಮ ವರನಟ ಡಾ. ರಾಜ್ ಕುಮಾರ್ ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಿದ್ದು ಯುವಕರಿಗೆ ಮಾದರಿಯಾಗಿದ್ದಾರೆ. ಒಲಂಪಿಕ್ಸ್‌ನಲ್ಲೂ ಯೋಗವನ್ನು ಪರಿಚಯಿಸಬೇಕೆಂದು ಮನವಿ ಮಾಡಿದರು.
ತೀರ್ಥಹಳ್ಳಿ ವೈದ್ಯಾಧಿಕಾರಿ ಡಾ. ರವಿಶಂಕರ್ ಉಡುಪ ಪ್ರಾಸ್ತಾವಿಕವಾಗಿ ಯೋಗ ಒಂದು ಅದ್ಭುತ ವಿಜ್ಞಾನ. ಇದಕ್ಕೆ 5000 ವರ್ಷಗಳ ಇತಿಹಾಸವಿದೆ. ಹಿಂದೆ ಯೋಗಿಗಳು ಮಾನಸಿಕ ಸ್ಥೈರ್ಯ ಮತ್ತು ಆಧ್ಯಾತ್ಮ ಸಾಧನೆ ಮಾಡಲು ಇದನ್ನು ಅಭ್ಯಾಸ ಮಾಡುತ್ತಿದ್ದರು. ನಂತರದಲ್ಲಿ ಪತಂಜಲಿ ಗುರುಗಳು ಸಾಮಾನ್ಯರೂ ಈ ಅಭ್ಯಾಸ ಮಾಡಲು ಅಷ್ಟಾಂಗ ಯೋಗ ಪರಿಚಯಿಸಿದರು. ಆದ್ದರಿಂದ ಇವರನ್ನು ಯೋಗದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.
ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಕಿ ವಿಜಢತರಾದವರಿಗೆ ಹಾಗೂ ಯೋಗಾಭ್ಯಾಸದಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಆಯುಷ್ ಅಧಿಕಾರಿ ಡಾ.ಲಿಂಗರಾಜ್ ಹಿಂಡಸಗಟ್ಟಿ, ಡಿಡಿಪಿಐ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಕೆಎಸ್ ಆರ್ ಪಿ ಡೆಪ್ಯುಟಿ ಕಮಾಂಡೆಂಟ್ ಮಂಜುನಾಥ್ ಅಣತಿ, ಸರ್ಕಾರಿ ಆಯುರ್ವೇದ ವೈದಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಯ ಪ್ರಾಚಾರ್ಯರಾದ ಡಾ. ವೀಣಾ ಎಂ.ಎಸ್, ಬಾಪೂಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶೀಲಾ, ಡಾ.ಮಹೇಶ್ ಇದ್ದರು.
---------ಪೋಟೊ: 21ಎಸ್‌ಎಂಜಿಕೆಪಿ01
ಶಿವಮೊಗ್ಗದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.