ಕನ್ನಡಪ್ರಭ ವಾರ್ತೆ ಮಂಡ್ಯ
ಉತ್ತಮ ಆರೋಗ್ಯಕ್ಕೆ ಯೋಗವೇ ಮೂಲ ಶಕ್ತಿ. ಸರ್ವರೋಗಕ್ಕೂ ದಿವ್ಯೌಷಧ. ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡರೆ ಚೈತನ್ಯಶೀಲತೆ, ಕ್ರಿಯಾಶೀಲತೆ ಬೆಳವಣಿಗೆ ಕಾಣುತ್ತದೆ ಎಂದು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಹೇಳಿದರು.ನಗರದ ಗಾಂಧಿ ಭವನದಲ್ಲಿ ಮಹಾತ್ಮ ಯೋಗ ಕೇಂದ್ರದಿಂದ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ್ದೇ ಭಾರತ. ಯೋಗದ ಮಹತ್ವವನ್ನು ಅರಿತು ಎಲ್ಲಾ ದೇಶದ ಜನರೂ ಅದನ್ನು ಅನುಸರಿಸುತ್ತಿದ್ದಾರೆ. ಯೋಗದ ಪ್ರತಿಯೊಂದು ಆಸನದಿಂದಲೂ ಒಂದೊಂದು ರೋಗವನ್ನು ದೂರವಿಡಬಹುದು. ಅಷ್ಟೊಂದು ಅಗಾಧ ಶಕ್ತಿ ಯೋಗಕ್ಕಿದೆ ಎಂದು ನುಡಿದರು.
ಯೋಗದಿಂದ ಮನಸ್ಸು ಸದಾ ಶಾಂತಚಿತ್ತವಾಗಿರುತ್ತದೆ. ಒತ್ತಡ ಸೃಷ್ಟಿಯಾಗುವುದಿಲ್ಲ. ದೇಹ ಸದಾ ಚಟುವಟಿಕೆಯಿಂದ ಇರುತ್ತದೆ. ಆಯಾಸವಾಗುವುದಿಲ್ಲ. ಯೋಗ-ಧ್ಯಾನ ಸಂಸ್ಕಾರ ಭೂಷಣವಾಗಿದ್ದು, ವ್ಯಕ್ತಿತ್ವವನ್ನೂ ಅರಳುವಂತೆ ಮಾಡುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢತೆ ಸಾಧಿಸಲು ಯೋಗವನ್ನು ಅನುಸರಿಸುವಂತೆ ತಿಳಿಸಿದರು.ಆಧುನಿಕ ಯುಗದಲ್ಲಿ ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ನೆಮ್ಮದಿಯನ್ನೇ ಕಳೆದುಕೊಂಡು ಖಿನ್ನತೆ ಆವರಿಸುತ್ತಿದೆ. ಅದರಿಂದ ಪಾರಾಗಬೇಕಾದರೆ ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಯೋಗ ಕಲಿಸುವುದರಿಂದ ಏಕಾಗ್ರತೆ ಮೂಡುತ್ತದೆ. ಬುದ್ಧಿ ಚುರುಕಾಗುತ್ತದೆ ಎಂದು ನುಡಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯ್‌ಕುಮಾರ್ ಮಾತನಾಡಿ, ಯೋಗದ ಮಹತ್ವವನ್ನು ಎಲ್ಲರೂ ಅರಿತುಕೊಂಡು ಅದನ್ನು ಚಾಚೂತಪ್ಪದೆ ಅನುಸರಿಸಬೇಕು. ಮನುಷ್ಯ ಆರೋಗ್ಯವಂತನಾಗಿದ್ದಾಗ ಮಾತ್ರ ಏನನ್ನಾದರೂ ಸಾಧಿಸಬಹುದು. ಸಾಧನೆಗೆ ಪ್ರೇರಣೆ ನೀಡುವ ಯೋಗವನ್ನು ಅನುಸರಿಸುವಂತೆ ತಿಳಿಸಿದರು.
ಪ್ರಾಚೀನ ಪರಂಪರೆಯಿಂದ ಬೆಳೆದು ಬಂದಿರುವ ಯೋಗ ನಮಗೆ ದೊರಕಿರುವುದೇ ಯೋಗಾಯೋಗ. ಅದನ್ನು ಕಳೆದುಕೊಳ್ಳದೆ ಸುಖಮಯ ಜೀವನ ನಡೆಸುವುದಕ್ಕೆ ಪ್ರೇರಕ ಶಕ್ತಿಯಾಗಿಸಿಕೊಳ್ಳಬೇಕು. ಯೋಗವನ್ನು ಅಳವಡಿಸಿಕೊಂಡವರಿಗೆ ವೈದ್ಯರ ಅಗತ್ಯತೆಯೇ ಇರುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಗಗುರು ಬಾಲಕೃಷ್ಣ ತಂತ್ರಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಯೋಗಪಟುಗಳಾದ ರಾಮಕೃಷ್ಣ, ಟಿ.ಎನ್.ನಾಗರಾಜು, ಜ್ಯೋತಿ, ಸಿ.ಎನ್.ತಾರಾದೇವಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗಾಂಧಿಭವನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಪಾಲ್ಗೊಂಡಿದ್ದರು. ಯೋಗಕೇಂದ್ರದ ಚಂದ್ರಶೇಖರ್, ಹುಚ್ಚೇಗೌಡ, ಶಿವಲಿಂಗೇಗೌಡ ಇತರರು ಭಾಗವಹಿಸಿದ್ದರು.ನೀಟ್ ಪರೀಕ್ಷೆ: 485 ವಿದ್ಯಾರ್ಥಿಗಳು ಗೈರು
ಕನ್ನಡಪ್ರಭ ವಾರ್ತೆ ಮಂಡ್ಯಭಾನುವಾರ ನಡೆದ ನೀಟ್ ಮರು ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 1,958 ವಿದ್ಯಾರ್ಥಿಗಳು ನೋಂದಣಿಯಾಗಿದ್ದವರ ಪೈಕಿ 1,473 ವಿದ್ಯಾರ್ಥಿಗಳು ಹಾಜರಾಗಿ 485 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.ಮರು ಪರೀಕ್ಷೆಯು ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಡಾ ಕುಮಾರ ಅವರು ನೀಟ್ ಪರೀಕ್ಷಾ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪರೀಕ್ಷೆಯು ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಿಗಿ ಭದ್ರತೆ ಹಾಗೂ ಮೂಲಸೌಕರ್ಯ ಪರಿಶೀಲಿಸಿದರು.
ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ಪರೀಕ್ಷೆ ಜಿಲ್ಲೆಯ 4 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು.