ಸಾರಾಂಶ
ಸೋಷಿಯಲ್ ವೆಲ್ ಫೇರ್ ಸೊಸೈಟಿಯಿಂದ ಕಟಗಳಲೆಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿಯೊಬ್ಬರೂ ಯೋಗ, ಧ್ಯಾನ ಮಾಡಬೇಕು. ಇದರ ಜೊತೆಗೆ ಪೌಷ್ಠಿಕ ಆಹಾರ ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಾಲೂಕು ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಸಲಹೆ ನೀಡಿದರು.
ಶುಕ್ರವಾರ ಕಟಗಳಲೆಯಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿ ಆಶ್ರಯದಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ವಿಶೇಷವಾಗಿ 30 ವರ್ಷ ದಾಟಿದ ಮಹಿಳೆಯರಿಗೆ ಸ್ಥನ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ಸ್ಥನದಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇತ್ತೀಚಿಗೆ ಗರ್ಭಕೋಶದ ಕ್ಯಾನ್ಯರ್ ಸಹ ಹೆಚ್ಚಾಗಿದೆ. ಮಹಿಳೆಯರಿಗೆ ಕಿಬ್ಬೊಟ್ಟೆ ನೋವು ಕಾಣಿಸಿದರೆ ವೈದ್ಯರಲ್ಲಿ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಶಶಿಕಲಾ ಮಾಹಿತಿ ನೀಡಿ, ಮಹಿಳೆಯರು ಸಮಾಜದಲ್ಲಿ ಎಷ್ಟೇ ಸಾಧನೆ ಮಾಡಿದರೂ ಕುಟುಂಬದಲ್ಲಿ ಈಗಲೂ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಯಾವುದೇ ಮಹಿಳೆ ಕುಟುಂಬದಲ್ಲಿ ಮಾನಸಿಕ, ದೈಹಿಕ ದೌರ್ಜನ್ಯಕ್ಕೆ ಒಳಗಾದರೆ ಮಹಿಳಾ ಸಾಂತ್ವನ ಸಹಾಯವಾಣಿ 181 ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ತಾಲೂಕಿನಲ್ಲಿ ಮಹಿಳಾ ಸಾಂತ್ವನವಾಣಿ ಕೇಂದ್ರ ಇದ್ದು ಮಹಿಳೆಯರಿಗಾಗಿ ಕಾರ್ಯನಿರ್ವಹಿಸುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ದೂರು ನೀಡಿದರೆ ಕಾನೂನು ಮುಖಾಂತರ ಸಹಾಯ ಪಡೆಯಲು ನಾವು ಸಹಾಯ ಮಾಡುತ್ತೇವೆ ಎಂದರು.
ಸೋಷಿಯಲ್ ವೆಲ್ ಫೇರ್ ಸೊಸೈಟಿ ಸಹಾಯಕ ನಿರ್ದೇಶಕ ಫಾ.ಅಭಿನವ್ ಉದ್ಘಾಟಿಸಿ ಮಾತನಾಡಿ, ಸೋಷಿಯಲ್ ವೆಲ್ ಫೇರ್ ಸೊಸೈಟಿ ಯಿಂದ ಸಮಾಜಕ್ಕೆ ಉಪಯೋಗುವ ಕಾರ್ಯಕ್ರಮ ಮಾಡುತ್ತಿದ್ದೇವೆ. ವಿಶೇಷವಾಗಿ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಇಂದು ಆರೋಗ್ಯ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಮುಖ್ಯ ಅತಿಥಿಯಾಗಿದ್ದ ಮೆಣಸೂರು ಗ್ರಾಪಂ ಅಧ್ಯಕ್ಷೆ ಬಿಂದು ಮಾತನಾಡಿ, ಹಲವಾರು ವರ್ಷಗಳಿಂದ ಸೋಷಿಯಲ್ ವೆಲ್ ಫೇರ್ ಸೊಸೈಟಿ ಯವರು ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ತರಬೇತಿ, ಮಾಹಿತಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ನಾವು ಸಹ ಸ್ವಸಹಾಯ ಸಂಘದಿಂದಲೇ ಮುಂದೆ ಬಂದಿದ್ದು ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಅತಿಥಿಗಳಾಗಿ ಸೋಷಿಯಲ್ ವೆಲ್ ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್, ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಪ್ರಿನ್ಸಿ ಸೆಬಾಸ್ಟಿನ್ ಉಪಸ್ಥಿತರಿದ್ದರು.ಶೈಲಾ ಸ್ವಾಗತಿಸಿದರು.ಮೇರಿ ವರ್ಗೀಸ್ ವಂದಿಸಿದರು.