ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮಕ್ಕಳ ಬೌದ್ಧಿಕ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳು ಪ್ರಾಮಾಣಿಕತೆ, ಪಾರದರ್ಶಕತೆಗೆ ಒತ್ತು ಕೊಡಬೇಕು. ಒಳ್ಳೆಯ ಮಾತುಗಳನ್ನು ಗ್ರಹಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಾಸವಾಗಿ ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ಹಾವೇರಿ ಹುಕ್ಕೇರಿ ಮಠದ ಶ್ರೀಮನ್ ನಿರಂಜನ ಪ್ರಣವಸ್ವರೂಪಿ ಸದಾಶಿವ ಮಹಾಸ್ವಾಮಿಗಳು ನುಡಿದರು.ಅವರು ಶನಿವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ವತಿಯಿಂದ ಹಾಗೂ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ನಡೆದ ಜ್ಞಾನ ದರ್ಶಿನಿ ಮತ್ತು ಜ್ಞಾನ ವರ್ಷಿಣಿ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಹಾಗೂ 21ನೇ ವರ್ಷದ ಅಂಚೆ- ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವದಿಸಿದರು.
ಇಲ್ಲಿ ಇಂದು ಬಿಡುಗಡೆಯಾದ ಪುಸ್ತಕಗಳ ಅಧ್ಯಯನದಿಂದ ವಿದ್ಯಾರ್ಥಿಗಳ ಜೀವನ ಸುಗಮವಾಗುತ್ತದೆ. ಆತ್ಮವಿಶ್ವಾಸ ಬೆಳೆಯುವುದು ಖಂಡಿತ. ಮೊಬೈಲ್ ಅಪಾಯಕಾರಿ ಎಂಬುದು ಸಿದ್ಧವಾಗಿದೆ. ಅದರ ಹಿಂದೆ ಹೋಗದೆ ಪುಸ್ತಕಗಳತ್ತ ಹರಿಸುವಂತಾಗಬೇಕು. ಪವಿತ್ರವಾದ ನಮ್ಮ ದೇಹವನ್ನು ಕೆಡಿಸಿಕೊಳ್ಳಬಾರದು ಎಂದರು.ಈ ಸಂದರ್ಭ ಅವರು ಜ್ಞಾನ ದರ್ಶಿನಿ ಹಾಗೂ ಜ್ಞಾನ ವರ್ಷಿಣಿ ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿದರು.
ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ, ಗಾಯಕ ಅರ್ಜುನ್ ಜನ್ಯ ಅವರು ಅಂಚೆ- ಕುಂಚ ರಾಜ್ಯ ಮಟ್ಟದ ಸ್ಪರ್ಧೆಯ ವಿಜೇತರನ್ನು ಪುರಸ್ಕರಿಸುತ್ತಾ, ನಮಗೆ ವಿದ್ಯೆಯೇ ವೇದಿಕೆಯಾಗಿದೆ. ಕಲೆಯನ್ನು ತಪಸ್ಸಿನಂತೆ ಏಕಾಗ್ರತೆ ಮತ್ತು ಸತತ ಪ್ರಯತ್ನದಿಂದ ಅಭ್ಯಾಸ ಮಾಡಿದರೆ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು, ಮಾನವೀಯತೆ ಇಲ್ಲದ ಜನ್ಮ ವ್ಯರ್ಥ. ಎಸ್.ಡಿ.ಎಂ. ಸಂಸ್ಥೆಗಳು ಸಂಸ್ಕಾರಕ್ಕೆ ಆದ್ಯತೆ ನೀಡುತ್ತವೆ. ಹಿರಿಯರಿಗೆ ಗೌರವ ನೀಡುವುದು, ಸಮಾನ ವಯಸ್ಕರನ್ನು ಸ್ನೇಹಿತರಂತೆ ಕಾಣುವುದು, ಕಿರಿಯರ ಮೇಲೆ ಅನುಕಂಪ ತೋರಿಸುವ ಗುಣವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.
ಒಲಂಪಿಕ್ಸ್‌ನಲ್ಲಿ ಕಂಚು ಪದಕಗಳು ಸಿಕ್ಕಿವೆ. ಇದು ಮುಂದಿನ ಬಾರಿ ಬೆಳ್ಳಿ- ಚಿನ್ನ ಸಿಗಲಿದೆ ಎಂಬುದನ್ನು ಖಾತ್ರಿಗೊಳಿಸಿದೆ. ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಪದಕ ಪಡೆದ ಹಾಗೂ ಭಾಗವಹಿಸಿದವರೆಲ್ಲರಿಗೂ ಡಾ. ಹೆಗ್ಗಡೆಯವರು ಅಭಿನಂದನೆಗಳನ್ನು ಸಲ್ಲಿಸಿದರು.ಉಪನಿರ್ದೇಶಕ ವೆಂಕಟೇಶ ಸುಬ್ರಾಯ ಪಟಗಾರ, ಎಸ್. ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಹರ್ಷೇಂದ್ರ ಕುಮಾರ್ ವೇದಿಕೆಯಲ್ಲಿದ್ದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಐ. ಶಶಿಕಾಂತ ಜೈನ್ ಸ್ವಾಗತಿಸಿದರು. ರಾಜ್ಯ ಯೋಗ ಸಂಘಟಕ ಶೇಖರ ಕಡ್ತಲ ವಿಜೇತರ ಪಟ್ಟಿ ವಾಚಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ವಂದಿಸಿದರು. ಶಿಕ್ಷಕ ಗಣೇಶ್ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಕುಂಚ- ಗಾನ- ನೃತ್ಯ ವೈಭವ ನಡೆಯಿತು.
ಆಟ- ಪಾಠಗಳು ಜೊತೆಯಾಗಿದ್ದಾಗ ಶಿಕ್ಷಣ ಅರ್ಥಪೂರ್ಣವಾಗಿದ್ದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಪುಸ್ತಕದ ಜೊತೆ ಇದ್ದಾಗ ಮಸ್ತಕದ ವಿಕಾಸವೂ ಆಗುವುದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು- ಸದಾಶಿವ ಮಹಾಸ್ವಾಮೀಜಿ