ಭಾರತದ ಆಧ್ಯಾತ್ಮ, ಆಯುರ್ವೇದ ಹಾಗೂ ಯೋಗ ಪ್ರಸಕ್ತ ವಿಶ್ವದ ಗಮನ ಸೆಳೆಯುತ್ತಿದ್ದು, ಭಾರತೀಯ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.

ಕಾರ್ಕಳ: ಭಾರತದ ಆಧ್ಯಾತ್ಮ, ಆಯುರ್ವೇದ ಹಾಗೂ ಯೋಗ ಪ್ರಸಕ್ತ ವಿಶ್ವದ ಗಮನ ಸೆಳೆಯುತ್ತಿದ್ದು, ಭಾರತೀಯ ಸಂಸ್ಕೃತಿಯ ಮಹತ್ವವನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.ಕಾರ್ಕಳ ರಾಮಮಂದಿರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗವು ಭಾರತದ ಪ್ರಾಚೀನ ಮತ್ತು ಅಮೂಲ್ಯ ಪರಂಪರೆಯಾಗಿದ್ದು, ದೇಹ ಹಾಗೂ ಮನಸ್ಸಿನ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಕಳೆದ 20 ವರ್ಷಗಳಿಂದ ಶ್ರೀರಾಮ ಮಂದಿರದಲ್ಲಿ ಯೋಗಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಮುಖ್ಯಶಿಕ್ಷಕ ಕೃಷ್ಣ ಆಚಾರ್ಯ ಹಾಗೂ ಸುಲೋಚನಾ ನಾಯಕ್ ಅವರನ್ನು ಪ್ರಗತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.ಪದ್ಮಪ್ರಸಾದ್ ಜೈನ್, ರಾಮಚಂದ್ರ ಬರೆಪ್ಪಾಡಿ, ಅರುಣ್ ಮಾಂಜ, ಡಾ. ಕೌಶಿಕ್, ಬಾಲಕೃಷ್ಣ ಹಿರಿಂಜ, ಸಂತೋಷ್ ರೆಂಜಾಳ, ಪ್ರೇಮ್ ಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ 35 ಮಂದಿ ಯೋಗಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರಗತಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಕೀರ್ತನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಳಿನಿ ಎಸ್. ಸುವರ್ಣ ಕಾರ್ಯಕ್ರಮ ನಿರ್ವಹಿಸಿದ್ದು, ರಕ್ಷಣ್ ಕುಮಾರ್ ಸಹಕರಿಸಿದರು.