ಸಾರಾಂಶ
ಜಿಲ್ಲೆಯ ಪ್ರಮುಖ ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರು ಮತ್ತು ಇತರ ಗಣ್ಯರು ಸಸಿಹತ್ಲು ಬೀಚಿನ ಸಮುದ್ರ ತೀರದ ಪ್ರಶಾಂತ ವಾತಾವರಣದಲ್ಲಿ ಯೋಗಾಭ್ಯಾಸ ಮಾಡಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಯೋಗ ಮತ್ತು ಯೋಗ್ಯತೆ ಎರಡೂ ಕೂಡಿ ಬಂದಾಗ ಮಾತ್ರ ವಿಕಾಸ ಸಾಧ್ಯವಿದ್ದು ಜೊತೆಗೆ ನಮ್ಮ ಪ್ರಯತ್ನ ಅತಿ ಅಗತ್ಯ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ನವಯುಗ ಪ್ರಾರಂಭಿಸಲು ನಾವೆಲ್ಲ ಸೇರಿ ನವಪಥದಲ್ಲಿ ನವ ಪ್ರಯತ್ನಗಳನ್ನು ಮಾಡಬೇಕೆಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸಸಿಹಿತ್ಲು ಬೀಚಿನಲ್ಲಿ ನಡೆದ ‘ಯೋಗ ವಿಥ್ ಯೋಧ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯೋಗದ ಬಗ್ಗೆ ಭಾರತ ವಿಶ್ವಸಂಸ್ಥೆಗೆ ಶಿಫಾರಸು ಮಾಡಿದ ಬಳಿಕ ಕಳೆದ ಹತ್ತು ವರ್ಷಗಳಿಂದ ಲೋಕದೆಲ್ಲೆಡೆ ಯೋಗ ಒಂದು ಜಾಗತಿಕ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ಮುಂದಿನ ದಿನಗಳಲ್ಲಿ ಸಸಿಹಿತ್ಲು ಬೀಚು ಸಾಹಸ ಕ್ರೀಡೆಗಳ ಒಂದು ದೊಡ್ಡ ತಾಣವಾಗುವ ನಿಟ್ಟಿನಲ್ಲಿ ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದೆಂದು ಹೇಳಿದರು.
ಜಿಲ್ಲೆಯ ಪ್ರಮುಖ ಕ್ರೀಡಾಪಟುಗಳು, ನಿವೃತ್ತ ಸೇನಾಧಿಕಾರಿಗಳು, ಚಲನಚಿತ್ರ ನಟರು, ಸಮಾಜ ಸೇವಕರು ಮತ್ತು ಇತರ ಗಣ್ಯರು ಸಸಿಹತ್ಲು ಬೀಚಿನ ಸಮುದ್ರ ತೀರದ ಪ್ರಶಾಂತ ವಾತಾವರಣದಲ್ಲಿ ಯೋಗಾಭ್ಯಾಸ ಮಾಡಿದರು.ಯೋಗ ಶಿಕ್ಷಕಿ ಶ್ರದ್ಧಾ ಸಂದೇಶ್ ರೈ ಯೋಗಾಭ್ಯಾಸವನ್ನು ನಡೆಸಿಕೊಟ್ಟರು. ಈಶ್ವರ್ ಪ್ರಸಾದ್ ಶೆಟ್ಟಿ ನಿರೂಪಿಸಿದರು.