ಸಾರಾಂಶ
ರಾಮನಗರ: ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಟಿಕೆಟ್ ಬಯಸಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ರವರು ತಮ್ಮನ್ನು ಸಂಪರ್ಕಿಸಿಲ್ಲ. ಆದರೆ, ಅವರ ಬೆಂಬಲಿಗರು ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಪ್ರತಿಕ್ರಿಯೆ ನೀಡಿದರು. ಚನ್ನಪಟ್ಟಣ ಕ್ಷೇತ್ರದ ರಾಜಕೀಯ ಬೆಳವಣಿಗೆ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಕೃಷ್ಣಮೂರ್ತಿರವರು, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯೋಗೇಶ್ವರ್ ಅವರಿಗೆ ಬಿಎಸ್ಪಿ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಕೇಳುತ್ತಿದ್ದಾರೆ. ಆದರೆ, ಈವರೆಗೂ ಯೋಗೇಶ್ವರ್ ರವರು ತಮ್ಮನ್ನು ಸಂಪರ್ಕಿಸಿ ಚರ್ಚೆ ಮಾಡಿಲ್ಲ ಎಂದರು. ಯೋಗೇಶ್ವರ್ ರವರು ಬಿಎಸ್ಪಿ ಪಕ್ಷದಿಂದ ಸ್ಪರ್ಧಿಸಲು ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡು ಬಂದಲ್ಲಿ ಪಕ್ಷದ ವರಿಷ್ಠರಾದ ಮಾಯಾವತಿ ಅವರೊಂದಿಗೆ ರಾಜ್ಯ ಸಮಿತಿ ಚರ್ಚೆ ಮಾಡಲಿದೆ. ಮಾಜಿ ಸಚಿವರು, ಅನುಭವಿ ರಾಜಕಾರಣಿಯಾಗಿರುವ ಯೋಗೇಶ್ವರ್ ರವರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ ಎಂದು ಕೃಷ್ಣಮೂರ್ತಿ ಹೇಳಿದರು.