ರಾಜ್ಯದ 108- ಆ್ಯಂಬುಲೆನ್ಸ್ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಎಂಟಿ (ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್) ಹಾಗೂ ಪೈಲೆಟ್ ಸಿಬ್ಬಂದಿಯ ವಿವಿಧ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಆದೇಶ ಮಾಡಿರುವುದು ಸ್ವಾಗತ, ಆದರೆ ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಯೋಗೀಶ್ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದ 108- ಆ್ಯಂಬುಲೆನ್ಸ್ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಎಂಟಿ (ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್) ಹಾಗೂ ಪೈಲೆಟ್ ಸಿಬ್ಬಂದಿಯ ವಿವಿಧ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಆದೇಶ ಮಾಡಿರುವುದು ಸ್ವಾಗತ, ಆದರೆ ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಯೋಗೀಶ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರವು ೧೦೮ ಆರೋಗ್ಯ ಕವಚ ಸೇವೆಯಡಿ ನೇಮಕಗೊಂಡಿರುವ ಸಿಬ್ಬಂದಿಗೆ ಕನಿಷ್ಠ ವೇತನದ ಜೊತೆಗೆ ಅನುಭವ ಬೋನಸ್ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ನೀಡುವ ಆದೇಶ ಹೊರಡಿಸಿರುವುದನ್ನು ಸ್ವಾಗತಿಸಿದರು. ಈ ನಿರ್ಧಾರದಿಂದ ನೌಕರರಲ್ಲಿ ಆಶಾವಾದ ಮೂಡಿದ್ದು, ಸೇವೆಯನ್ನು ಇನ್ನಷ್ಟು ನಿಷ್ಠೆಯಿಂದ ನಿರ್ವಹಿಸಲು ಉತ್ತೇಜನ ಸಿಕ್ಕಿದೆ. ಆದರೆ, ಇನ್ನೂ ಹಲವು ಪ್ರಮುಖ ಬೇಡಿಕೆಗಳು ಬಾಕಿ ಉಳಿದಿದ್ದು, ಅವುಗಳನ್ನು ತ್ವರಿತವಾಗಿ ಈಡೇರಿಸಬೇಕಾಗಿದೆ ಎಂದು ಅವರು ಹೇಳಿದರು.
೨೦೦೮ರಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಒಳಪಡಿಸದೇ ನೇರ ನೇಮಕಾತಿ ಮಾಡಿಕೊಳ್ಳಬೇಕು. ದೀರ್ಘಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಭದ್ರತೆ ಮತ್ತು ಗೌರವ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಆಗ್ರಹಿಸಿದರು.ಪ್ರಸ್ತುತ ಜಾರಿಯಲ್ಲಿರುವ ನಾಲ್ಕು ವಲಯ (ಝೋನ್) ವ್ಯವಸ್ಥೆಯಿಂದ ವೇತನ ಮತ್ತು ಕರ್ತವ್ಯ ಹಂಚಿಕೆಯಲ್ಲಿ ಅಸಮತೋಲನ ಉಂಟಾಗುತ್ತಿದೆ, ಇದನ್ನು ಪರಿಷ್ಕರಿಸಿ ಎರಡು ವಲಯಗಳಾಗಿ ರೂಪಿಸುವ ಮೂಲಕ ಸಮಾನತೆ ತರಬೇಕು ಎಂದು ಒತ್ತಾಯಿಸಿದರು.
ಜೊತೆಗೆ, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಂಭವಿಸಬಹುದಾದ ಅಪಘಾತಗಳು ಅಥವಾ ಪ್ರಾಣಾಪಾಯದ ಸಂದರ್ಭಗಳಲ್ಲಿ ಸಿಬ್ಬಂದಿಗೆ ಕನಿಷ್ಠ ₹೫೦ ಲಕ್ಷ ಪರಿಹಾರ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಕೆಲವರು ನೌಕರರು ಸೇವಾ ಹಿರಿತನ ಕಳೆದುಕೊಂಡಿರುವುದರಿಂದ ಅವರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಅಂತಹ ಪ್ರಕರಣಗಳನ್ನು ಪರಿಶೀಲಿಸಿ ಹಿರಿತನ ಮರುಸ್ಥಾಪನೆ ಮಾಡಬೇಕು ಎಂದು ಅವರು ಮನವಿ ಮಾಡಿದರು.ಇನ್ನೂ ಹಲವರು ತಮ್ಮ ಸ್ವಂತ ಜಿಲ್ಲೆಗಳ ಹೊರಗೆ ಕಾರ್ಯನಿರ್ವಹಿಸುತ್ತಿದ್ದು, ಕುಟುಂಬ ಜೀವನಕ್ಕೂ ತೊಂದರೆ ಉಂಟಾಗಿದೆ. ಆದ್ದರಿಂದ ಅವರನ್ನು ತಮ್ಮ ಮೂಲ ಜಿಲ್ಲೆಗೆ ವರ್ಗಾವಣೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
೧೦೮ ಆ್ಯಂಬುಲೆನ್ಸ್ ಸೇವೆ ರಾಜ್ಯದ ಆರೋಗ್ಯ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದು, ತುರ್ತು ಸಂದರ್ಭಗಳಲ್ಲಿ ಜನರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವುದು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು.ಸರ್ಕಾರವು ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಆದೇಶ ಮಾಡಿರುವುದನ್ನು ಕಾರ್ಯರೂಪಕ್ಕೆ ತರಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಟರಾಜು, ಸುರೇಶ್ ಇತರರು ಉಪಸ್ಥಿತರಿದ್ದರು.