ಸಾರಾಂಶ
2024ರಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಶಮಾನೋತ್ಸವ ಹೊಸ್ತಿಲಲ್ಲಿ ‘ಮಹಾ ಸಬಲೀಕರಣಕ್ಕಾಗಿ ಯೋಗ’ ಎಂಬ ಉತ್ಕೃಷ್ಟ ಧ್ಯೇಯ ವಾಕ್ಯದೊಂದಿಗೆ ಮಹಿಳೆಯರ ಸಮಗ್ರ ಆರೋಗ್ಯಕ್ಕಾಗಿ, ಯೋಗದ ಮೂಲಕ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಮೇ 14 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗೋತ್ಸವವನ್ನು ಆಯೋಜಿಸಲಾಗಿದೆ ಎಂದು ಆಶ್ರಮದ ಪೀಠಾಧ್ಯಕ್ಷ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.ಚಂದ್ರವನ ಆಶ್ರಮದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಶ್ರೀ ತ್ರಿನೇತ್ರ ಇಂಟರ್ ನ್ಯಾಷನಲ್ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಮೈಸೂರು ಬೃಂದಾವನ ಬಡಾವಣೆಯ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ, ಯೋಗೋತ್ಸವ ನಡೆಯಲಿದೆ ಎಂದರು.
ಯೋಗೋತ್ಸವವನ್ನು ಜಿಲ್ಲಾಧಿಕಾರಿ ಡಾ. ಕುಮಾರ ಉದ್ಘಾಟಿಸುವರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಅಹಲ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಪಂ ಸಿಇಒ ಶೇಕ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಸೇರಿ ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.ಯೋಗೋತ್ಸವದಲ್ಲಿ 600 ರಿಂದ 1000 ವಿದ್ಯಾರ್ಥಿಗಳು ಜೊತೆಗೆ ಸಾರ್ವಜನಿಕರೂ ಸಹ ಭಾಗವಹಿಸಬಹುದು. ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ವಿಶ್ವವಿದ್ಯಾಲಯದಿಂದ ಯೋಗ ಅರ್ಹತಾ ಪತ್ರ ವಿತರಿಸಲಾಗುವುದು ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಗಿರೀಶ್ ಚಂದ್ರ ಮಾತನಾಡಿ, 2024ರಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಶಮಾನೋತ್ಸವ ಹೊಸ್ತಿಲಲ್ಲಿ ‘ಮಹಾ ಸಬಲೀಕರಣಕ್ಕಾಗಿ ಯೋಗ’ ಎಂಬ ಉತ್ಕೃಷ್ಟ ಧ್ಯೇಯ ವಾಕ್ಯದೊಂದಿಗೆ ಮಹಿಳೆಯರ ಸಮಗ್ರ ಆರೋಗ್ಯಕ್ಕಾಗಿ, ಯೋಗದ ಮೂಲಕ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿದೆ ಎಂದು ತಿಳಿಸಿದರು.ಸುದ್ಧಿಗೋಷ್ಠಿಯಲ್ಲಿ ಮೈಸೂರು ಜಿಎಆರ್‌ಸಿ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಸಹಾಯಕ ಪ್ರಾಧ್ಯಾಪಕ ಡಾ.ರೇವಣ್ಣ, ಡೆಪ್ಯುಟಿ ಫೈನಾನ್ಸ್ ಅಧಿಕಾರಿ ವಿದ್ವಾನ್ ಶಿವಮೂರ್ತಿ, ಮಠದ ಕಾರ್ಯದರ್ಶಿ ಟಿ.ಪಿ. ಶಿವಕುಮಾರ್ ಇದ್ದರು.