ಪಕ್ಷಕ್ಕೆ ಸೇರಿದಾಕ್ಷಣ ಹುದ್ದೆ ಸಿಗದು

| Published : Oct 08 2024, 01:13 AM IST

ಸಾರಾಂಶ

ಪಕ್ಷಕ್ಕೆ ಸೇರಿದಾಕ್ಷಣ ಯಾವುದೇ ಹುದ್ದೆ ಸಿಗುವುದಿಲ್ಲ .ಮೊದಲು ಪಕ್ಷಕ್ಕೆ ದುಡಿಯಬೇಕು, ನಂತರ ಹುದ್ದೆಗಳು ಸಿಗುತ್ತವೆ ಎಂದು ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಗಣೇಶ್‌ ಮೂರ್ತಿ ತಿಳಿಸಿದರು.

ಹೊಸದುರ್ಗ: ಪಕ್ಷಕ್ಕೆ ಸೇರಿದಾಕ್ಷಣ ಯಾವುದೇ ಹುದ್ದೆ ಸಿಗುವುದಿಲ್ಲ .ಮೊದಲು ಪಕ್ಷಕ್ಕೆ ದುಡಿಯಬೇಕು, ನಂತರ ಹುದ್ದೆಗಳು ಸಿಗುತ್ತವೆ ಎಂದು ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಗಣೇಶ್‌ ಮೂರ್ತಿ ತಿಳಿಸಿದರು.

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರ ತಪ್ಪು ನಿರ್ಧಾರದಿಂದ ತಾಲೂಕಿನಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿ ಚುನಾವಣೆ ವೇಳೆ ತಾಲೂಕಿನಲ್ಲಿ ಸಂಘಟನೆ ಮಾಡುವುದಾಗಿ ಹೇಳಿ ಓಡಾಡಿದರು. ಆದರೆ ತಾಲೂಕಿನ ಜನ ಅವರನ್ನು ಒಪ್ಪಲಿಲ್ಲ. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಕಣ್ಮರೆಯಾಗಿದ್ದಾರೆ . ಈ ರೀತಿ ಆದರೆ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂದರು.

ನಾನೇನು ಅಧ್ಯಕ್ಷ ಸ್ಥಾನಕ್ಕೆ ಅಂಟಿಕೊಂಡವನಲ್ಲ. ನನಗಿಂತ ಉತ್ತಮರಾದವರು ಯಾರಾದರೂ ಹುದ್ದೆ ಸ್ವೀಕರಿಸಲು ಮುಂದೆ ಬಂದರೆ, ಖಂಡಿತ ಬಿಟ್ಟುಕೊಡಲು ಸಿದ್ಧನಿದ್ದೇನೆ. ಪಕ್ಷಕ್ಕೆ ಸದಸ್ಯತ್ವ ನೊಂದಣಿ ಮಾಡುವಂತೆ ರಾಜ್ಯ ಘಟಕ ಸೂಚಿಸಿದೆ. ಅಲ್ಲದೆ ವಿವಿಧ ಘಟಕಗಳ ರಚನೆಗೂ ಸೂಚಿಸಿದೆ. ಈ ಹಿನ್ನಲೆಯಲ್ಲಿ ಕಾರ್ಯಕರ್ತರು ನಿಷ್ಠೆಯಿಂದ ಸಂಘಟನೆಗೆ ಮುಂದಾದರೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜೆಡಿಎಸ್‌ ಪ್ರಬಲ ಪಕ್ಷವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು

ಈ ವೇಳೆ ಜಿಲ್ಲಾಧ್ಯಕ್ಷ ಜಯಣ್ಣ, ಬಾ ಮೈಲಾರಪ್ಪ, ನಾಗಣ್ಣ, ಆಶ್ರಫ್‌ ಮತ್ತಿತರರು ಹಾಜರಿದ್ದರು.