ಲೀಡ್‌...........ಬದುಕಿನ ನಡುವೆ ಹೋರಾಟ ಮಾಡಬೇಕು

| Published : Jul 17 2024, 12:56 AM IST

ಸಾರಾಂಶ

ಗೋಕಾಕ್ ಚಳವಳಿ ನಂತರ ಡಿ. 27 ರಂದು ಕನ್ನಡ ನಾಮಫಲಕಗಳ ಕಡ್ಡಾಯಕ್ಕಾಗಿ ನಡೆಸಿದ ಕರವೇ ಹೋರಾಟ ಬಹುದೊಡ್ಡ ಐತಿಹಾಸಿಕ ಹೋರಾಟ. ಅನ್ಯಭಾಷೆಗಳ ನಾಮಫಲಕಗಳನ್ನು ಚಿಂದಿ-ಚಿಂದಿ ಮಾಡಲಾಗಿತ್ತು

ಕರವೇ ಬೆಳ್ಳಿ ಹಬ್ಬದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಹೋರಾಟವೇ ಬದುಕಲ್ಲ, ಬದುಕಿನ ನಡುವೆ ಹೋರಾಟಗಳನ್ನು ನಡೆಸಬೇಕು. ಜೀವನದಲ್ಲಿ ಹೋರಾಟ ಎಷ್ಟು ಮುಖ್ಯವೋ ಬದುಕು ಅಷ್ಠೆ ಮುಖ್ಯ ಎಂಬುದನ್ನು ಅರಿತು ಕೆಲಸ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಬೆಳ್ಳಿ ಹಬ್ಬದ ಅಂಗವಾಗಿ ಬಾಗೇಪಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕರವೇಗೆ 25 ಮತ್ತು ಹರೀಶ್‍ಗೆ 15’ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನೆಲ, ಜಲ, ನಾಡು-ನುಡಿಗೆ ಧಕ್ಕೆಬಾರದ ರೀತಿಯ ವಾತಾವರಣ ಮೂಡುವಂತೆ ಮಾಡುವುದೇ ಕರವೇ ಹೋರಾಟಗಳ ಮುಖ್ಯ ಉದ್ದೇಶವಾಗಿದೆ ಎಂದರು.

ಕನ್ನಡ ನಾಮಫಲಕಗಳ ಕಡ್ಡಾಯ

ಗೋಕಾಕ್ ಚಳವಳಿ ನಂತರ ಡಿ. 27 ರಂದು ಕನ್ನಡ ನಾಮಫಲಕಗಳ ಕಡ್ಡಾಯಕ್ಕಾಗಿ ನಡೆಸಿದ ಕರವೇ ಹೋರಾಟ ಬಹುದೊಡ್ಡ ಐತಿಹಾಸಿಕ ಹೋರಾಟ. ಅನ್ಯಭಾಷೆಗಳ ನಾಮಫಲಕಗಳನ್ನು ಚಿಂದಿ-ಚಿಂದಿ ಮಾಡಲಾಗಿತ್ತು. ಅದನ್ನು ಹತ್ತಿಕ್ಕಬೇಕು ಎಂದು ನಡೆಸಿದ ಪೊಲೀಸರ ಯತ್ನ ಫಲಿಸಲಿಲ್ಲ. ಕೊಲೆ, ಸುಲಿಗೆ, ದರೋಡೆ, ಮೋಸ ಇತ್ಯಾದಿಗಳನ್ನು ಮಾಡಿ ಜೈಲಿಗೆ ಹೋದಾಗ ಅಂಜಬೇಕೆ ಹೊರತು ನಾಡು-ನುಡಿಗಾಗಿ ನಡೆಸಿದ ಹೋರಾಟದಲ್ಲಿ ಜೈಲಿಗೆ ಹೋದರೆ ಹೆದರಬೇಕಾಗಿಲ್ಲ ಎಂದು ಕಾಯಕರ್ತರಿಗೆ ಧೈರ್ಯ ತುಂಬಿಸಿದರು.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿದ್ದೇನೆ. ಇದನ್ನು ಜಾರಿಗೆ ತನ್ನಿ ನೀವು ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಹೋಗುತ್ತೀರಿ ಎಂದು ಮನವಿ ಮಾಡಿದ್ದೇವೆ. ಅದಕ್ಕೆ ಸಿಎಂ 15 ದಿನಗಳ ಕಾಲಾವಕಾಶವನ್ನು ತೆಗೆದುಕೊಂಡಿದ್ದಾರೆ. ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಆಗಲಿಲ್ಲ ಎಂದರೆ ಮತ್ತೊಮ್ಮೆ ಇಡೀ ಕರ್ನಾಟಕದಾದ್ಯತ ಹೋರಾಟ ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಾವಂತ ಮಕ್ಕಳಿಗೆ ಸನ್ಮಾನ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ಹರೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹಾಗೂ ತಾಲೂಕು ಅಧ್ಯಕ್ಷ ಕೆ.ಎನ್.ಹರೀಶ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಅಲ್ಲದೆ ಎಸ್.ಎಸ್.ಎಲ್.ಸಿ ಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಕರವೇ ಕಾರ್ಯಕರ್ತರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್, ಮಹಿಳಾ ಜಿಲ್ಲಾಧ್ಯಕ್ಷೆ ಸುಜಾತಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹನಾಯ್ಡು, ಮತ್ತಿತರರು ಇದ್ದರು.

16ಬಿಜಿಪಿ-1: ಬಾಗೇಪಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರವೇ ಬೆಳ್ಳಿ ಹಬ್ಬವನ್ನು ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಉದ್ಘಾಟಿಸಿದರು.