ಯುವ ಜನಾಂಗಕ್ಕೆ ಕಾನೂನು ಅರಿವು ಅಗತ್ಯವಿದೆ

| Published : Dec 20 2023, 01:15 AM IST

ಸಾರಾಂಶ

ಜಗತ್ತಿನಾದ್ಯಂತ ಜೀತ ಪದ್ಧತಿ ಎಂಬ ಪಿಡುಗು ತಾಂಡವವಾಡುತ್ತಿದ್ದ ಸಮಯದಲ್ಲಿ ಎಚ್ಚೆತ್ತ ವಿಶ್ವಸಂಸ್ಥೆಯು ೧೯೪೮ರಲ್ಲಿ ಜೀತ ಪದ್ಧತಿ ನಿಷೇಧ ಅಂಗೀಕಾರ ಮಾಡಿತು. ೧೯೫೦ರಿಂದ ಡಿಸೆಂಬರ್ ೧೦ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಘೋಷಣೆ ಮಾಡುವುದರ ಮೂಲಕ ಮಾನವನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜೀತ ಪದ್ಧತಿ ಕಂಡು ಬರುತ್ತಿದ್ದು, ಅರಸೀಕೆರೆ ತಾಲೂಕಿನಲ್ಲೂ ಮೂರು ಪ್ರಕರಣ ಬೆಳಕಿಗೆ ಬಂದಿರುವುದು ವಿಪರ್ಯಾಸವಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಯುವ ಜನಾಂಗವು ಕಾನೂನಿನ ಅರಿವು ಪಡೆಯುವ ಮೂಲಕ ಸ್ಥಳೀಯ ಜನತೆಗೆ ಮಾರ್ಗದರ್ಶನ ಮಾಡಬೇಕು. ಮಾನವ ಹಕ್ಕುಗಳ ರಕ್ಷಣೆಗಾಗಿ ಚಿಂತನೆ ನಡೆಸುವುದರೊಂದಿಗೆ ಆರೋಗ್ಯಕರ ಸಮಾಜವನ್ನು ಕಟ್ಟಲು ಮುಂದಾಗಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗು ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಬಿ.ಎನ್.ಅಮರನಾಥ್‌ ಕರೆ ನೀಡಿದರು.

ನಗರದ ಪ್ರತಿಭಾ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತು ಪ್ರತಿಭಾ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗು ಕಾನೂನು ಅರಿವು ಮತ್ತು ನೆರವು ಕಾಯಕ್ರಮ ಉದ್ಘಾಟಸಿ ಮಾತನಾಡಿದರು. ಮಾನವ ಹಕ್ಕುಗಳ ದಿನಾಚರಣೆ ಮೂಲ ಉದ್ದೇಶ ಸಮಾಜದಲ್ಲಿ ನೊಂದಂತಹ ಜನತೆಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದ್ದು, ಜೊತೆಯಲ್ಲಿ ಕಾನೂನು ಅರಿವು ಮೂಡಿಸುವುದೇ ಪ್ರಮುಖವಾಗಿದೆ. ಕಾನೂನು ಮಾಹಿತಿ ನೀಡುವ ಮತ್ತು ಪಡೆಯುವ ಸಾಮರ್ಥ್ಯ ಯುವ ಜನಾಂಗಕ್ಕೆ ಇದೆ. ಆ ನಿಟ್ಟಿನಲ್ಲಿ ಇಂದು ನಿಮ್ಮ ಕಾಲೇಜಿನಲ್ಲಿ ಜಾಗೃತಿ ಮೂಡಿಸಲು ಆಗಮಿಸಿದ್ದೇವೆ. ಮನುಷ್ಯನ ಜೀವನ ಅನುಗುಣವಾಗಿ ಭಾರತದ ಸಂವಿಧಾನದಲ್ಲಿ ಹಲವಾರು ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಕಾಲಕಾಲಕ್ಕೆ ಬದಲಾವಣೆ ಕೂಡ ಮಾಡಲಾಗುತ್ತಿದೆ. ಮಾನವನು ತನ್ನ ಜೀವಿತದ ಅವಧಿಯಲ್ಲಿ ಇರುವ ಹಕ್ಕುಗಳ ರಕ್ಷಣೆ ಮಾಡಿಕೊಳ್ಳುವ ಜೊತೆಯಲ್ಲಿ ಮತ್ತೊಬ್ಬರ ಹಕ್ಕುಗಳಿಗೆ ಅಡಚಣೆ ಆಗದಂತೆ ವರ್ತಿಸುವುದು ಕೂಡ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.

ಜಗತ್ತಿನಾದ್ಯಂತ ಜೀತ ಪದ್ಧತಿ ಎಂಬ ಪಿಡುಗು ತಾಂಡವವಾಡುತ್ತಿದ್ದ ಸಮಯದಲ್ಲಿ ಎಚ್ಚೆತ್ತ ವಿಶ್ವಸಂಸ್ಥೆಯು ೧೯೪೮ರಲ್ಲಿ ಜೀತ ಪದ್ಧತಿ ನಿಷೇಧ ಅಂಗೀಕಾರ ಮಾಡಿತು. ೧೯೫೦ರಿಂದ ಡಿಸೆಂಬರ್ ೧೦ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಘೋಷಣೆ ಮಾಡುವುದರ ಮೂಲಕ ಮಾನವನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜೀತ ಪದ್ಧತಿ ಕಂಡು ಬರುತ್ತಿದ್ದು, ಅರಸೀಕೆರೆ ತಾಲೂಕಿನಲ್ಲೂ ಮೂರು ಪ್ರಕರಣ ಬೆಳಕಿಗೆ ಬಂದಿರುವುದು ವಿಪರ್ಯಾಸವಾಗಿದೆ. ತಾಯಿ ಗರ್ಭದಿಂದ ಗೋರಿಗೆ ಹೋಗುವವರೆಗೂ ಪ್ರತಿ ಮನುಷ್ಯನಿಗೆ ತನ್ನ ಹಕ್ಕುಗಳ ಅವಶ್ಯಕತೆ ಇದೆ. ಜನನ ಮತ್ತು ಮರಣ ಪ್ರಮಾಣ ಪತ್ರ ಸೇರಿದಂತೆ ಶಿಕ್ಷಣ, ಉದ್ಯೋಗ, ಸೂರು, ಆರೋಗ್ಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪಡೆಯುವುದು ಪ್ರತಿ ಮನುಷ್ಯನ ಹಕ್ಕಾಗಿದೆ. ಪ್ರತಿಯೊಬ್ಬರು ಕಾನೂನು ಅರಿವಿನೊಂದಿಗೆ ತಮ್ಮ ಕರ್ತವ್ಯಗಳನ್ನು ಅರಿಯಬೇಕು. ಅದರಲ್ಲೂ ಯುವ ಜನಾಂಗವು ಕಾನೂನು ಜ್ಞಾನವನ್ನು ಪಡೆದರೆ ಅವರು ನಡೆದಾಡುವ ಜ್ಞಾನದ ಕೋಶವಾಗುತ್ತಾರೆ. ಹಿರಿಯರು ಕಿರಿಯರು ಎನ್ನದೇ ಕಾನೂನು ಚೌಕಟ್ಟಿನಲ್ಲಿ ಜೀವನವನ್ನು ಸಾಗಿಸಿದಲ್ಲಿ ಎಲ್ಲರ ಜೀವನವು ಸುಗಮವಾಗಿರುತ್ತದೆ. ಕಾನೂನನ್ನು ಯಾರು ಗೌರವಿಸುತ್ತಾರೋ ಅವರನ್ನು ಸಮಾಜ ಗೌರವಿಸುತ್ತದೆ ಮತ್ತು ಸಮಾಜದ ಒಂದು ಭಾಗವೂ ಆಗುತ್ತಾರೆ. ಆ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆಯಲ್ಲಿರುವ ಕಾನೂನು ತಜ್ಞರನ್ನು ಭೇಟಿಯಾಗಿ ಸಂವಾದ ಮತ್ತು ಅಧ್ಯಯನಗಳನ್ನು ನಡೆಸಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಈ ಕಾರ್ಯಾಗಾರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ಸಿ.ಎಚ್‌. ದೇವರಾಜು ಮಾತನಾಡಿ, ಇಡೀ ನ್ಯಾಯಾಂಗ ವ್ಯವಸ್ಥೆಯೇ ನಮ್ಮ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುತ್ತಿರುವುದು ಸ್ವಾಗತಾರ್ಹವಾಗಿದೆ. ನ್ಯಾಯಾಧೀಶರು ತಿಳಿಸಿದಂತೆ ಪ್ರತಿ ವ್ಯಕ್ತಿಯು ಕಾನೂನು ಅರಿವನ್ನು ಪಡೆಯುವುದರ ಮೂಲಕ ತಮ್ಮ ಹಕ್ಕಗಳ ಮಾಹಿತಿಗಳನ್ನು ತಿಳಿಯಬೇಕು. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಕಾನೂನು ಅರಿವು ಮತ್ತು ನೆರವು ಅತ್ಯವಶ್ಯಕತೆ ಇದೆ. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಕಾನೂನು ತಜ್ಞರು ನೀಡುವ ಕಾಯ್ದೆಗಳ ಅರಿವು ಮೂಡಿಸಿಕೊಂಡು ನಿಮ್ಮ ಸುತ್ತಮುತ್ತಲಿನ ಜನತೆಗೂ ಮಾನವ ಹಕ್ಕುಗಳ ಮಹತ್ವ ಮತ್ತು ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ವಕಿಲರಾದ ಸಿದ್ದಮಲ್ಲಪ್ಪ, ಆರ್.ವಿಜಯಕುಮಾರ್, ಪಿ.ನಟರಾಜು ಇವರು ವಿವಿಧ ಕಾನೂನುಗಳ ಪರಿಚಯ ಮತ್ತು ಮಾಹಿತಿಯೊಂದಿಗೆ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಪರಶಿವಮೂರ್ತಿ, ವಕೀಲರಾದ ಅಂದಾನಿ, ಕಾವ್ಯಶ್ರೀ ಬಾಯಿ, ಕಾಲೇಜು ಉಪನ್ಯಾಸಕರಾದ ಕುಬೇರಪ್ಪ, ರುದ್ರೇಶ್, ರಂಗನಾಥ್‌, ಹರೀಶ್‌, ಸೌಮ್ಯಲತಾ, ವೀಣಾ, ದೀಪು, ಪ್ರೇಮಲತಾ, ಪೂಜಾ, ಕೋಮಲ ಸೇರಿದಂತೆ ಆಡಳಿತ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.