ಕಲಬುರಗಿ: ಉದ್ಯೋಗ ಅರಸಿ ಹೋದ ಯುವಕರು ರಷ್ಯಾದಲ್ಲಿ ಪರದಾಟ

| Published : Feb 23 2024, 01:45 AM IST

ಕಲಬುರಗಿ: ಉದ್ಯೋಗ ಅರಸಿ ಹೋದ ಯುವಕರು ರಷ್ಯಾದಲ್ಲಿ ಪರದಾಟ
Share this Article
  • FB
  • TW
  • Linkdin
  • Email

ಸಾರಾಂಶ

ಸೆಕ್ಯೂರಿಟಿ ಕೆಲಸ ಕೊಡಿಸುವುದಾಗಿ ಹೇಳಿದ ಏಜೆಂಟ್ ಮಾತು ನಂಬಿ ರಷ್ಯಾಗೆ ತೆರಳಿರುವ ಕಲಬುರಗಿ ಮೂಲದ ಮೂವರು ಯುವಕರು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮನ್ನು ರಕ್ಷಣೆ ಮಾಡುವಂತೆ ವಿಡಿಯೋ ಮೂಲಕ ಮಾಡಿರುವ ಮನವಿ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸೆಕ್ಯೂರಿಟಿ ಕೆಲಸ ಕೊಡಿಸುವುದಾಗಿ ಹೇಳಿದ ಏಜೆಂಟ್ ಮಾತು ನಂಬಿ ರಷ್ಯಾಗೆ ತೆರಳಿರುವ ಕಲಬುರಗಿ ಮೂಲದ ಮೂವರು ಯುವಕರು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮನ್ನು ರಕ್ಷಣೆ ಮಾಡುವಂತೆ ವಿಡಿಯೋ ಮೂಲಕ ಮಾಡಿರುವ ಮನವಿ ಈಗ ತೀವ್ರ ಸಂಚಲನ ಮೂಡಿಸಿದೆ.

ಯುವಕರನ್ನು ರಷ್ಯಾ ಯುದ್ಧಕ್ಕಾಗಿ ತನ್ನ ಖಾಸಗಿ ಸೈನ್ಯ ಪಡೆ ವ್ಯಾಘನರ್‌ಗೆ ಬಳಸಿಕೊಂಡಿದೆ ಎನ್ನಲಾಗಿದ್ದು, ಯುವಕರು ಕಂಗಾಲಾಗಿದ್ದಾರೆ.

ಸೈಯದ್ ಇಲಿಯಾಸ್ ಹುಸೇನಿ, ಮೊಹಮ್ಮದ್ ಸಮೀರ್ ಅಹಮದ್ , ಸೋಫಿಯಾ ಮೊಹಮ್ಮದ್ ಕಲಬುರಗಿ ನಗರದ ಇಸ್ಲಾಂಬಾದ್ ಕಾಲೋನಿ, ಮಿಲ್ಲಟ್ ನಗರ ಬಡಾವಣೆ ವಾಸಿಗಳಾಗಿದ್ದಾರೆ. ಈ ಪೈಕಿ ಓರ್ವ ಯುವಕನ ತಂದೆ ಸಯ್ಯದ್ ನವಾಜ್ ಅಲಿ ಕಾಳಗಿ ಅವರು ತಮ್ಮ ಪುತ್ರನ ರಕ್ಷಣೆಗೆ ಅಗ್ರಹಿಸಿದ್ದಾರೆ. ಸಯ್ಯದ್ ಅಲಿ ಅವರು ಮಾಡ್ಬುಲ್ ಠಾಣೆಯಲ್ಲಿ ಮುಖ್ಯ ಪೇದೆ ಆಗಿದ್ದಾರೆ.

ವಾಟ್ಸಾಪ್‌ ಗ್ರೂಪ್‌ನಲ್ಲಿ ಬರುವ ಸಂದೇಶದಿಂದ ಕಳೆದ ಸುಮಾರು ಒಂದು ತಿಂಗಳ ಹಿಂದೆ ದುಬೈ ಏಜೆಂಟನ ಪರಿಚಯವಾಗಿದೆ. ಯುವಕರು ಆತನನ್ನು ಕೆಲಸ ಕೊಡಿಸುವಂತೆ ಕೇಳಿದ್ದಾರೆ. ಮನೆಯಲ್ಲಿ ಸಹ ಈ ಯುವಕರು ತಮ್ಮ ಪೋಷಕರಿಗೆ ಕೆಲಸದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಕಲಬುರಗಿಯಿಂದ ದುಬೈಗೆ ತೆರಳಿ, ಬಾಬಾ ಎಂಬ ಏಜೆಂಟ್ ಮೂಲಕ ಅಲ್ಲಿಂದ ರಷ್ಯಾಕ್ಕೆ ತೆರಳಿದ್ದಾರೆ. ಏಜೆಂಟ್‌ ಯುವಕರಿಂದ ತಲಾ ಮೂರು ಲಕ್ಷ ಹಣ ಪಡೆದುಕೊಂಡಿದ್ದನೆಂದು ಗೊತ್ತಾಗಿದೆ. ಸೆಕ್ಯೂರಿಟಿ ಕೆಲಸ ನಂಬಿ ಹೋಗಿದ್ದು, ಅಲ್ಲಿ ವಾಸ್ತವ ಬೇರೆಯೇ ಆಗಿದೆ. ಯುದ್ಧ ಪೀಡಿತ ಉಕ್ರೇನ್ ಗಾಡಿಯಲ್ಲಿ ಯುದ್ಧಕ್ಕೆ ನಿಯೋಜನೆ ಮಾಡಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಈ ಯುವಕರು ವಿಡಿಯೋ ಸಂದೇಶ ಮಾಡಿ ರವಾನಿಸಿದ್ದಾರೆ. ತಮ್ಮನ್ನ‌ ವಾಪಸ್ ತಾಯ್ನಾಡಿಗೆ ಕರೆಸಿಕೊಳ್ಳುವಂತೆ ವಿಡಿಯೋ ಸಂದೇಶದಲ್ಲಿ ದುಂಬಾಲು ಬಿದ್ದಿದ್ದಾರೆ. ಈ ನಡುವೆ ರಷ್ಯಾದಲ್ಲಿ ಸಿಲುಕಿದ ಯುವಕರನ್ನು ಸುರಕ್ಷಿತವಾಗಿ ಕರೆದು ತರುವಂತೆ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಭಾರತದಿಂದ ಒಟ್ಟು ಆರು ಜನರನ್ನು ರಷ್ಯಾಗೆ ಕಳುಹಿಸಿದ್ದ ಬಾಬಾ ಏಜೆಂಟ್, ಈ ಪೈಕಿ ಕರ್ನಾಟಕದಿಂದ ನಾಲ್ವರನ್ನು ಕಳುಹಿಸಿದ್ದ. ಕರ್ನಾಟಕದ ಇನ್ನೊಬ್ಬ ಯುವಕ ಎಲ್ಲಿಯವನು, ಎಲ್ಲಿದ್ದಾನೆ ಎಂಬ ಮಾಹಿತಿ ಇಲ್ಲ ಎನ್ನಲಾಗಿದೆ.

ಸಂಸದ ಜಾಧವ ಪ್ರತಿಕ್ರಿಯೆ: ಏತನ್ಮಧ್ಯೆ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ ಪ್ರತಿಕ್ರಿಯಿಸಿ, ಕಲಬುರಗಿಯಿಂದ ರಷ್ಯಾ ದೇಶಕ್ಕೆ ಸೆಕ್ಯೂರಿಟಿ ಗಾರ್ಡ್ ಅಥವಾ ಹೆಲ್ಪರ್ ಕೆಲಸಕ್ಕೆ ಎಂದು ಕರೆದೊಯ್ದು ರಷ್ಯಾ ಗಡಿ ಭಾಗದಲ್ಲಿ ಆರ್ಮಿ ಟ್ರೈನಿಂಗ್ ಕೊಟ್ಟು ಉಕ್ರೇನ್‌ ಯುದ್ಧದಲ್ಲಿ ಉಪಯೋಗಿಸಿಕೊಳ್ಳುತ್ತಿರುವ ಕುರಿತು ಈಗಾಗಲೇ ಕೇಂದ್ರ ಸರ್ಕಾಕ್ಕೆ ತಿಳಿಸಲಾಗಿದೆ. ವಿದೇಶಾಂಗ ಸಚಿವರು ಹಾಗೂ ಸಂಬಂಧಪಟ್ಟ ರಷ್ಯಾ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಿರ್ದೇಶಕರಿಗೆ ಫೆ. 17ರಂದು ಪತ್ರ ಬರೆದು ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಶೀಘ್ರದಲ್ಲಿ ಕಲಬುರಗಿ ಯುವಕರನ್ನು ರಷ್ಯಾ ದೇಶದಿಂದ ಕರೆತರುವ ಎಲ್ಲಾ ಕಾರ್ಯಗಳು ನಡೆಯುತ್ತಿವೆ. ಅವರ ತಂದೆ-ತಾಯಿಗೆ ಯಾವುದೇ ಭಯ ಬೇಡ ಎಂದು ಸಂಸದರು ಧೈರ್ಯ ತುಂಬಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು ಆಗ್ರಹ: ಯುದ್ಧಪೀಡಿತ ರಷ್ಯಾದಲ್ಲಿ ಸಿಲುಕಿರುವ ಕಲಬುರಗಿ ಮೂಲದ ಮೂವರ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ರಾಜ್ಯಸಭೆ ವಿರೋಧಪಕ್ಷದ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಮೂರು ಯುವಕರು ಯುದ್ಧಪೀಡಿತ ರಷ್ಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕುರಿತು ವರದಿಯಾಗಿದ್ದು, ಯುವಕರನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಅವರು ಆಗ್ರಹಿಸಿದ್ದಾರೆ.

ರಾಜ್ಯಸಭೆ ವಿರೋಧಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕೇಂದ್ರದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಕಲಬುರಗಿ ಮೂವರು ಯುವಕರು ಹಾಗೂ ತೆಲಂಗಾಣದ ಒಬ್ಬ ಯುವಕನಿಗೆ ಉದ್ಯೋಗದ ಆಮಿಷವೊಡ್ಡಿ ಇದೀಗ ಅವರನ್ನು ಬಲವಂತವಾಗಿ ಉಕ್ರೇನ್ ವಿರುದ್ಧದ ಯುದ್ಧಕ್ಕೆ ತಳ್ಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿವಿಧ ಮಾಧ್ಯಮಗಳ ವರದಿ ಪ್ರಕಾರ ಕಳೆದ ಒಂದು ವರ್ಷದಲ್ಲಿ ಭಾರತದ ನೂರಕ್ಕೂ ಹೆಚ್ಚು ಯುವಕರನ್ನು ರಷ್ಯಾದ ಸೈನ್ಯದಲ್ಲಿ ಸಹಾಯಕರಾಗಿ ನೇಮಿಸಿಕೊಳ್ಳಲಾಗಿದೆ ಎಂಬ ಆಘಾತಕಾರಿ ವಿಷಯಗಳು ಬಿತ್ತರವಾಗುತ್ತಿದೆ. ರಷ್ಯಾದಲ್ಲಿ ಸಂಕಷ್ಟ ಎದುರಿಸುತ್ತಿರುವ ಎಲ್ಲಾ ಭಾರತೀಯರು ಹಾಗೂ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಡಿಗೆ ಕರೆತರುವಂತೆ ಖರ್ಗೆ ವಿನಂತಿಸಿದ್ದಾರೆ.