ಸಾರಾಂಶ
‘ಕರ್ನಾಟಕಕ್ಕಾಗಿ ನಾವು’ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ 13 ದಿನಗಳ 3,000 ಕಿಲೋಮೀಟರ್‌ಗಳ ಬೈಕ್ ಜಾಥಾ ಗುರುವಾರ ಮಂಗಳೂರು ಪ್ರವೇಶಿಸಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸುವಂತೆ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್ ಹೇಳಿದ್ದಾರೆ.‘ಕರ್ನಾಟಕಕ್ಕಾಗಿ ನಾವು’ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ 13 ದಿನಗಳ 3,000 ಕಿಲೋಮೀಟರ್‌ಗಳ ಬೈಕ್ ಜಾಥಾ ಗುರುವಾರ ಮಂಗಳೂರು ಪ್ರವೇಶಿಸಿದ ಸಂದರ್ಭ ಇಲ್ಲಿನ ಪುರಭವನದ ಎದುರು ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೆಆರ್‌ಎಸ್ ಪಕ್ಷದ ರಾಜ್ಯಧ್ಯಕ್ಷ ರವಿ ಕೃಷ್ಣಾರೆಡ್ಡಿ ಮಾತನಾಡಿ, ನಾಡಪ್ರೇಮಿಗಳೇ, ಏಳಿ, ಎದ್ದೇಳಿ, ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಿ, ಭವ್ಯ ಸಮಾಜವನ್ನು ನಿರ್ಮಿಸಿ. ಹೆಮ್ಮೆ ಮತ್ತು ಘನತೆಯಿಂದ ಜೀವಿಸಿ, ಸ್ವಾಭಿಮಾನದಿಂದ ಬದುಕಿ, ಬಾಳಿ ಎಂದು ಕರೆ ನೀಡಿದರು.ಅವೈಜ್ಞಾನಿಕ ಆಚಾರಗಳನ್ನು ವಿರೋಧಿಸಿ ಹೋರಾಟಗಳನ್ನು ಮಾಡಿದವರು ಮಂಗಳೂರಿನ ಕುದ್ಮುಲ್ ರಂಗರಾವ್ ಎಂದು ಅವರು ನೆನಪಿಸಿಕೊಂಡರು.
ಬೈಕ್ ಜಾಥಾದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್, ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ಸಂಘಟನಾ ಕಾರ್ಯದರ್ಶಿ ಎಲ್. ಜೀವನ್, ಚಂದ್ರಶೇಖರ್ ಮಠದ, ಬಿ. ಜಿ. ಕುಂಬಾರ, ಪ್ರವೀಣ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಸುನಿತಾ ಮತ್ತಿತರರಿದ್ದರು.