ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವ ತುಡಿತ, ಶಿಸ್ತು ಮುಖ್ಯ: ಶಾಸಕ ಮಾನೆ

| Published : Feb 23 2024, 01:45 AM IST

ಸಾರಾಂಶ

ಸಾಧಿಸುವ ತುಡಿತ ಹಾಗೂ ಶಿಸ್ತು ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯ.

ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಸಾಧಿಸುವ ತುಡಿತ ಹಾಗೂ ಶಿಸ್ತು ವಿದ್ಯಾರ್ಥಿ ಜೀವನದಲ್ಲಿ ಬಹಳ ಮುಖ್ಯ. ಈ ಅಂಶಗಳನ್ನು ರೂಢಿಸಿಕೊಂಡರೆ ಗೆಲುವು ಸುಲಭ ಸಾಧ್ಯ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಕಲಕೇರಿ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಶಸ್ಸು ಹೊಂದಲು ಕಠಿಣ ಪರಿಶ್ರಮ, ಧೈರ್ಯ ಹಾಗೂ ಶ್ರದ್ಧೆ ಬಹಳ ಮುಖ್ಯವಾದವು. ವಿದ್ಯಾರ್ಥಿಗಳಲ್ಲಿ ಸದಾಕಾಲವೂ ಹೊಸತನ್ನು ಕಲಿಯುವ, ತಿಳಿದುಕೊಳ್ಳುವ ತುಡಿತ ಇರಬೇಕು. ಕಾಲ ಬದಲಾಗಿದ್ದು, ಸ್ಪರ್ಧೆ ಹೆಚ್ಚಿದೆ. ಸ್ಪರ್ಧೆಗೆ ಅನುಗುಣವಾಗಿ ನಮ್ಮ ವಿದ್ಯಾರ್ಥಿಗಳನ್ನೂ ಸಜ್ಜುಗೊಳಿಸುವ ಕೆಲಸ ನಡೆಯಬೇಕಿದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಭವಿಷ್ಯವೇ ಮಂಕಾಗುವ ಸಾಧ್ಯತೆ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಗಮನ ನೀಡಲಾಗಿದೆ. ವಿಷಯ ಪರಿಣಿತರಿಂದ ಮಾದರಿ ಪ್ರಶ್ನೆ ಪತ್ರಿಕೆಗಳುಳ್ಳ ವಿಶೇಷ ಪುಸ್ತಕ ಮುದ್ರಿಸಿ ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ ತರಬೇತಿ ಸಹ ನೀಡಲಾಗಿದೆ ಎಂದು ತಿಳಿಸಿದರು.

ಪ್ರಾಚಾರ್ಯೆ ಕವಿತಾ ಎಲ್. ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೀಳರಿಮೆ ತೊರೆಯಬೇಕಿದೆ. ಆತ್ಮವಿಶ್ವಾಸ ಜೊತೆಗಿದ್ದರೂ ಏನು ಬೇಕಾದರೂ ಸಹ ಸಾಧಿಸಬಹುದಾಗಿದೆ. ಜೀವನದಲ್ಲಿ ಕಲ್ಲು-ಮುಳ್ಳು, ಕಷ್ಟ-ಸುಖದ ಅನುಭವವಾಗಬೇಕು. ಮಕ್ಕಳ ಮೇಲೆ ಹೆತ್ತವರು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅದನ್ನು ಹುಸಿಗೊಳಿಸದೇ ಮುನ್ನುಗ್ಗಿ ಎಂದು ಕರೆ ನೀಡಿದ ಅವರು ಮೊಬೈಲ್, ಇಂಟರ್‌ನೆಟ್ ಬಳಕೆ ಅಭ್ಯಾಸಕ್ಕೆ ಪೂರಕವಾಗಿರಲಿ. ಅದನ್ನು ಬಿಟ್ಟು ಅನವಶ್ಯಕ ಗೀಳು ಬೆಳೆಸಿಕೊಂಡರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ಮುಖಂಡರಾದ ಪ್ರಕಾಶ ಬಣಕಾರ, ಗುಂಡನಗೌಡ ಪಾಟೀಲ, ಪ್ರಕಾಶ ಕಾಕೋಳ, ಭೀಮಣ್ಣ ಲಮಾಣಿ ಈ ಸಂದರ್ಭದಲ್ಲಿದ್ದರು.