ಸಾರಾಂಶ
ಕಂಬ ಹೂಳಲು ಗುಂಡಿ ತೆಗೆಯುವ ಯಂತ್ರದ ಬಳಕೆ । ಗುತ್ತಿಗೆ ಮಾಡುತ್ತಿರುವುದಕ್ಕೆ ಅಧಿಕೃತ ವಿದ್ಯುತ್ ಗುತ್ತಿಗೆದಾರರಿಂದ ಆಕ್ಷೇಪ
ಶ್ರೀವಿದ್ಯಾ ಸಕಲೇಶಪುರಕನ್ನಡಪ್ರಭ ವಾರ್ತೆ ಸಕಲೇಶಪುರ
ಚೆಸ್ಕಾಂನ ಲೈನ್‌ಮ್ಯಾನ್‌ಗಳೇ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುವ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರು. ತೆರಿಗೆ ವಂಚಿಸುತ್ತಿದ್ದಾರೆ ಎಂಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ.ಗುತ್ತಿಗೆದಾರರು ಮನೆಗಳಿಗೆ, ಮೋಟರ್‌ಗಳಿಗೆ ಹಾಗೂ ವಾಣಿಜ್ಯ ಉದ್ದೇಶದ ಕಟ್ಟಡ ಸೇರಿದಂತೆ ಗ್ರಾಹಕರಿಗೆ ಅಗತ್ಯವಿರುವ ಎಲ್ಲ ರೀತಿಯ ವಿದ್ಯುತ್ ಸೌಲಭ್ಯ ಕಲ್ಪಿಸಲು ಪರವಾನಗಿ ಹೊಂದಿರಬೇಕು. ಆದರೆ, ಸಕಲೇಶಪುರ ತಾಲೂಕಿನ ಯಸಳೂರು ಹಾಗೂ ಹೆತ್ತೂರು ಉಪ ಪ್ರಸಾರಣ ಕೇಂದ್ರದ ಲೈನ್‌ಮ್ಯಾನ್‌ಗಳೇ ಗುತ್ತಿಗೆದಾರರ ಕೆಲಸ ನಿರ್ವಹಿಸುವ ಮೂಲಕ ಗುತ್ತಿಗೆದಾರರಿಗೆ ಹಾಗೂ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವ್ಯಕ್ತಿಯೊಬ್ಬರೂ ವಿದ್ಯುತ್ ಕಾಮಗಾರಿ ನಡೆಸುವ ಮುನ್ನ ಇಲಾಖೆಯಲ್ಲಿ ನೊಂದಾಯಿಸಿಕೊಂಡು ಶಾಖಾಧಿಕಾರಿಗಳು ಅಂದಾಜುಪಟ್ಟಿ ಸಿದ್ಧಪಡಿಸಿ, ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ಶುಲ್ಕ ಪಾವತಿಸಿ, ಕಾರ್ಯಾದೇಶ ಪಡೆದ ನಂತರ ಕಾಮಗಾರಿ ನಿರ್ವಹಿಸಬಹುದಾಗಿದೆ. ಆದರೆ, ಲೈನ್‌ಮ್ಯಾನ್‌ಗಳು ಈ ಯಾವುದೇ ನಿಯಮಗಳನ್ನು ಪಾಲಿಸದೆ ಲಿಂಕ್ ಲೈನ್‌ಗಳಲ್ಲಿ ಬಳಸಲಾಗುವ ಹಳೆಯ ವಿದ್ಯುತ್ ಕಂಬ, ಇಲಾಖೆಯ ಸಮಾಗ್ರಿಗಳಾದ ೪ ಪಿನ್, ಕ್ಲ್ಯಾಂಪ್, ರಾಬಿಟ್ ಕಂಡಕ್ಟರ್ ಹಾಗೂ ಸದ್ಯ ಇಲಾಖೆ ಉಪಯೋಗಿಸದ ವಿದ್ಯುತ್ ತಂತಿಗಳನ್ನು ಬಳಸಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಬರುತ್ತಿವೆ.ಎಲ್ಲೆಲ್ಲಿ ವಂಚನೆ:
ಹೆತ್ತೂರು ಚೆಸ್ಕಾಂ ಉಪ ಪ್ರಸಾರಣ ಕೇಂದ್ರದ ಹಾಡ್ಯ ಗ್ರಾಮದಲ್ಲಿ ನಿರ್ಮಾಣ ಹಂತದ ರೆಸಾರ್ಟ್ ಒಂದಕ್ಕೆ ಆರು ಕಂಬಗಳನ್ನು ಆಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದರೆ, ದೊಡ್ಡನಹಳ್ಳಿ ಗ್ರಾಮದಲ್ಲಿ ೧೧ ಹಳೆಯ ವಿದ್ಯುತ್ ಕಂಬ ಬಳಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಹೀಗೆ ತಾಲೂಕಿನ ಅತ್ತಿಗಾನಹಳ್ಳಿ, ಹೊಂಗಡಹಳ್ಳ, ಕೂಡುರಸ್ತೆ ಗ್ರಾಮದಲ್ಲಿ ೩ ರಿಂದ ೧೦ ಕಂಬಗಳನ್ನು ಬಳಸಿ ಯಾವುದೇ ನಿಯಮ ಪಾಲಿಸದೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಸರ್ಕಾರಕ್ಕೆ ಲಕ್ಷಾಂತರ ತೆರಿಗೆ ವಂಚಿಸಲಾಗಿದೆ. ಐಗೂರು ಗ್ರಾಮ ಸಮೀಪದ ಕಾಫಿ ಬೆಳೆಗಾರರೊಬ್ಬರ ಸೋಲಾರ್ ಬೇಲಿಗೆ ಮೀಟರ್ ಇಲ್ಲದೆ ವಿದ್ಯುತ್ ನೀಡುವ ಮೂಲಕವೂ ಲೈನ್‌ಮ್ಯಾನ್‌ಗಳು ವಂಚಿಸಿರುವುದನ್ನು ಪತ್ತೆ ಹಚ್ಚಿದ್ದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಇತ್ತೀಚೆಗೆ ಹೆತ್ತೂರು ಗ್ರಾಮದ ಹಾಡ್ಯ ಗ್ರಾಮ ಸಮೀಪ ಲೈನ್‌ಮ್ಯಾನ್‌ಗಳನ್ನು ಘೇರಾವ್ ಮಾಡಿ ಪ್ರತಿಭಟನೆ ನಡೆಸಿದ್ದರು.ದುರುಪಯೋಗ:
ಐದನೂರು ಮೀಟರ್ ಅಂತರದಲ್ಲಿರುವ ಐಪಿಸೆಟ್‌ಗಳಿಗೆ ಮೀಟರ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಬಾರದು ಎಂದು ಸರ್ಕಾರ 2023ರ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಿದೆ. ವಿದ್ಯುತ್ ಸಂಪರ್ಕ ಪಡೆಯಲೇಬೇಕು ಎನ್ನುವ ವ್ಯಕ್ತಿಗಳು ಟ್ರಾನ್ಸ್‌ಫಾರಂರ್ ಆಳವಡಿಸಿಕೊಳ್ಳ ಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರದ ಈ ಆದೇಶವನ್ನು ಸ್ಥಳೀಯ ಚೆಸ್ಕಾಂ ಅಧಿಕಾರಿಗಳು, ಲೈನ್‌ಮ್ಯಾನ್‌ಗಳು ಸ್ವಷ್ಟವಾಗಿ ಉಲ್ಲಂಘಿಸಿದ್ದಾರೆ ಎನ್ನಲಾಗುತ್ತಿದೆ.ವಿದ್ಯುತ್ ಕಂಬಗಳನ್ನು ಹಾಕಲು ಹಾಗೂ ತೆಗೆಯಲು ಡಿಗ್ಗಿಂಗ್ ಮಿಷನ್‌ಗಳನ್ನು ಬಳಸುವುದು ವಾಡಿಕೆ. ಈ ಒಂದು ಮಿಷಿನ್ ಬೆಲೆ ೨೦ ಲಕ್ಷ ರು.ಗೂ ಅಧಿಕ ಎನ್ನಲಾಗಿದ್ದು ಈ ಮಿಷಿನ್ ಹೆತ್ತೂರು ಚೆಸ್ಕಾಂನ ಇಬ್ಬರು ಲೈನ್‌ಮ್ಯಾನ್‌ಗಳ ಬಳಿ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಲೈನ್‌ಮ್ಯಾನ್‌ಗಳು ಅಕ್ರಮವಾಗಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಲೈನ್‌ಮ್ಯಾನ್‌ಗಳನ್ನು ವರ್ಗಾವಣೆಗೊಳಿಸಲಾಗುವುದು.ಮಂಜುನಾಥ್. ಕಾರ್ಯಪಾಲಕ ಅಭಿಯಂತರ, ಚೆಸ್ಕಾಂ ವಿಭಾಗ ಸಕಲೇಶಪುರ.
ಲೈನ್‌ಮ್ಯಾನ್‌ಗಳು ವಿದ್ಯುತ್ ಗುತ್ತಿಗೆದಾರರ ಕೆಲಸ ನಿರ್ವಹಿಸುತ್ತಿರುವುದರಿಂದ ವಿದ್ಯುತ್ ಗುತ್ತಿಗೆದಾರರಿಗೆ ಕೆಲಸ ಇಲ್ಲದಾಗಿದೆ. ಆದ್ದರಿಂದ ಈ ಅಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲ ಅಧಿಕಾರಿಗಳು ಹಾಗೂ ಲೈನ್‌ಮ್ಯಾನ್‌ಗಳನ್ನು ಸೇವೆಯಿಂದ ವಜಾಗೊಳಿಸಬೇಕು.ಮಂಜುನಾಥ್. ಅಧ್ಯಕ್ಷರು. ವಿದ್ಯುತ್ ಗುತ್ತಿಗೆದಾರರ ಸಂಘ. ಸಕಲೇಶಪುರ.
ಇತ್ತೀಚೆಗೆ ವಿದ್ಯುತ್ ಗುತ್ತಿಗೆದಾರರು ಲೈನ್‌ಮ್ಯಾನ್‌ಗಳ ವಿರುದ್ಧ ಸಕಲೇಶಪುರದಲ್ಲಿ ಪ್ರತಿಭಟಿಸಿದರು.