ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸುತ್ತೂರು ಶ್ರೀಮಠದಿಂದ ಇಂದು ನಡೆಯುತ್ತಿರುವ ಸೇವಾ ಕಾರ್ಯಗಳು ಮುಂದಿನ ಪೀಳಿಗೆಯ ಶ್ರೇಯೋಭಿವೃದ್ಧಿಗೆ ಪೂರಕವಾಗಿವೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಡಾ. ಲಿಂಗರಾಜ ಗಾಂಧಿ ಅಭಿಪ್ರಾಯಪಟ್ಟರು.ಶ್ರೀ ಶಿವರಾತ್ರೀಶ್ವರ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣಕ್ಕಾಗಿ ಸೌಲಭ್ಯಗಳು ಇಲ್ಲದ ಪರಿಸ್ಥಿತಿಯಲ್ಲಿ ಶ್ರೀರಾಜೇಂದ್ರ ಸ್ವಾಮೀಜಿ, ಕೆ.ಆರ್. ನಗರದಲ್ಲಿ ಪ್ರೌಢಶಾಲೆ ಹಾಗೂ ವಿದ್ಯಾರ್ಥಿನಿಲಯ ಪ್ರಾರಂಭಿಸಿರುವ ವಿಚಾರ ತಿಳಿದು ಶ್ರೀಗಳ ಆಶೀರ್ವಾದ ಪಡೆದು ವಿದ್ಯಾಭ್ಯಾಸ ಪೂರೈಸಿದೆ. ಬಳಿಕ ಇದೇ ಸಂಸ್ಥೆಯ ಚಾಮರಾಜನಗರ ಜೆಎಸ್ಎಸ್ ಕಾಲೇಜಿನಲ್ಲಿ ಉಫನ್ಯಾಸಕನಾಗಿಯೂ ಸೇವೆ ಸಲ್ಲಿಸಿದೆ ಎಂದರು.
ವಿದ್ಯಾರ್ಥಿ ನಿಲಯದಲ್ಲಿ ನಾನು ಪಡೆದುಕೊಂಡ ಸಂಸ್ಕೃತಿ, ಸಂಸ್ಕಾರಗಳು ಜೀವನದಲ್ಲಿ ಬಹಳಷ್ಟು ಸಹಕಾರಿಯಾದವು. ಇವೆಲ್ಲದರ ಕಾರಣದಿಂದಾಗಿ ನನ್ನಂತೆ ಇನ್ನೂ ಬಹಳಷ್ಟು ಜನ ಜೀವನದಲ್ಲಿ ಉನ್ನತ ಸ್ಥಾನಮಾನ ಹೊಂದಿ ಜೀವನ ಹಸನು ಮಾಡಿಕೊಂಡಿದ್ದಾರೆ. ಶ್ರೀಮಠದಿಂದ ಪಡೆದ ಉಪಕಾರಕ್ಕೆ ಪ್ರತಿಯಾಗಿ ಸಮಾಜಕ್ಕೆ ಏನಾದರೂ ಕೈಲಾದ ಸೇವೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಶ್ರೀಮಠಕ್ಕೂ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.ಗ್ರಾಮೀಣ ಪ್ರದೇಶದಿಂದ ಆರಂಭಗೊಂಡ ಸಂಸ್ಥೆಯ ಕಾರ್ಯಚಟುವಟಿಕೆ ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದವರೆಗೂ ವಿಸ್ತರಿಸಿವೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ಧೀಶಕ್ತಿಯ ಕಾರಣದಿಂದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳದಿದೆ. ಜೆಎಸ್ಎಸ್ ಮಹಾವಿದ್ಯಾಪೀಠವು ಮಾನವ ಬದುಕಿಗೆ ಉಜ್ವಲವಾದ ಬೆಳಕು ನೀಡುತ್ತಿದೆ ಎಂದು ಅವರು ಹೇಳಿದರು.
ಶ್ರೀಮಠದ ಎಲ್ಲಾ ಪೀಠಾಧಿಪತಿಗಳ ತಪಃಶಕ್ತಿ, ಅವಿರತ ಕಾಯಕ ನಿಷ್ಠೆ, ಪರೋಪಕಾರ, ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳು ಇದಕ್ಕೆ ಕಾರಣವಾಗಿವೆ. ಇಲ್ಲಿ ನಡೆಯುವ ಅರ್ಥಪೂರ್ಣ ಕಾರ್ಯ ಚಟುಚಟಿಕೆಗಳಲ್ಲಿ ಸ್ವಯಂ ಸೇವಕನಾಗಿ ತೊಡಗಿಸಿಕೊಂಡು ಕೈಲಾದ ಸಹಕಾರ ನೀಡಲು ನಾನು ಸದಾ ಸಿದ್ದ ಎಂದು ಅವರು ತಿಳಿಸಿದರು.ಡಾ.ಎಂ. ನಂಜುಂಡಪ್ಪ ಮಾತನಾಡಿ, ಶ್ರೀಮಠದಲ್ಲಿ ವಿದ್ಯಾರ್ಥಿಗಳಿಗೆ ಪ್ರಸಾದ ಮತ್ತು ವಿದ್ಯಾರ್ಜನೆಗೆ ತೊಂದರೆಗಳಿದ್ದರೂ ಅವುಗಳೆಲ್ಲವನ್ನೂ ಅತ್ಯಂತ ತಾಳ್ಮೆಯಿಂದ ನಿಭಾಯಿಸಿದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು ವ್ಯವಸ್ಥೆ ಮಾಡಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಶ್ರೀಮಠದ ಆಶ್ರಯ ಪಡೆದು ಉನ್ನತ ಅಧಿಕಾರಿಗಳಾಗಿ ವಿಶ್ವದ ನಾನಾ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಾ ಪೂಜ್ಯರನ್ನು ಅನವರತವೂ ನೆನೆಪಿಸಿಕೊಳ್ಳುತ್ತಿದ್ದಾರೆ ಎಂದರು.
ಇಂತಹ ಮಹಾಸಂಸ್ಥೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪವಾಡ ಸದೃಶ್ಯ ರೀತಿಯಲ್ಲಿ ಅಭಿವೃದ್ಧಿಪಡಿಸಿ ಶ್ರೀಮಠದ ಕೀರ್ತಿಯನ್ನು ವಿಶ್ವದಾದ್ಯಂತ ಬೆಳಗುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.ಅಧ್ಯಕ್ಷ ಎಲ್. ರೇವಣ್ಣಸಿದ್ದಯ್ಯ ಅವರು ಶ್ರೀ ಸಿದ್ದಗಂಗಾ ಮಠದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೆ ವಿದ್ಯಾಭ್ಯಾಸ ಮಾಡಿ ನಂತರದ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಬಂದು ರಾಜೇಂದ್ರ ಶ್ರೀಗಳಲ್ಲಿ ಆಶ್ರಯ ಕೇಳಿಕೊಂಡಾಗ ಪ್ರಧಾನ ಭವನದ ವಿದ್ಯಾರ್ಥಿನಿಲಯದಲ್ಲಿರುವಂತೆ ಆಶೀರ್ವಾದ ಮಾಡಿದರು.
ಶ್ರೀಗಳ ಆಶ್ರಯದಿಂದ ವಿದ್ಯಾಭ್ಯಾಸ ಮಾಡಿ ಐಪಿಎಸ್ ತೇರ್ಗಡೆಯಾಗಿ ಪೋಲಿಸ್ ಇಲಾಖೆಯಲ್ಲಿ ವೃತ್ತಿ ಪ್ರಾರಂಭಿಸಿ ಡಿಜಿಪಿ ಹುದ್ದೆಯವರೆಗೆ ಕೆಲಸ ನಿರ್ವಹಿಸಲು ಸಾಧ್ಯವಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕೂಡ ಅದೇ ರೀತಿ ಸಂಸ್ಥೆಯನ್ನುಅಭಿವೃದ್ಧಿಪಡಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.ಎ.ಎಸ್. ಚನ್ನಬಸಪ್ಪ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಮಂಟೇಲಿಂಗಾ ಚಾರ್ ವಂದಿಸಿದರು.