ಯುವಜನರು ಗರಡಿ ಕುಸ್ತಿ ಉಳಿಸಬೇಕು

| Published : Oct 17 2023, 12:45 AM IST

ಸಾರಾಂಶ

ಕುಸ್ತಿ ಪೈಲ್ವಾನರ ನಿರ್ಮಾಣದಲ್ಲಿ ಗರಡಿ ಮನೆಗಳ ಪಾತ್ರ ಬಹುಮುಖ್ಯವಾಗಿದೆ.
ಶಿಕಾರಿಪುರ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ದೊಣ್ಣೆ ರಾಯನ ಗರಡಿಮನೆ ಅಧ್ಯಕ್ಷರಾಗಿ ಪೈಲ್ವಾನ್ ಬೆಣ್ಣೆ ಶಿವರಾಜ್ ಆಯ್ಕೆಯಾಗಿದ್ದಾರೆ. ಭಾನುವಾರ ಸಂಜೆ ನಡೆದ ಆಯ್ಕೆ ಪ್ರಕ್ರಿಯೆ ನಂತರ ನೂತನ ಅಧ್ಯಕ್ಷ ಬೆಣ್ಣೆ ಶಿವರಾಜ್ ಮಾತನಾಡಿ, ಗ್ರಾಮೀಣ ಕ್ರೀಡೆಗಳು ನಾಡಿನ ಸಂಸ್ಕೃತಿ ಪ್ರತೀಕ. ಹಲವು ಕ್ರೀಡೆಗಳು ವಿನಾಶವಾಗಿವೆ. ಇದೀಗ ಗ್ರಾಮೀಣ ಕಲೆಯಲ್ಲಿ ಹೆಚ್ಚು ಪ್ರಸಿದ್ಧವಾಗಿ ಗಂಡುಕಲೆ ಎಂಬ ಹಿರಿಮೆ ಹೊಂದಿದ ಕುಸ್ತಿ ಸಹ, ವಿನಾಶದ ಅಂಚಿನಲ್ಲಿದೆ ಎಂದರು. ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಬಹುಮುಖ್ಯ ಜವಾಬ್ದಾರಿ ಯುವಕರ ಮುಂದಿದೆ. ಆದರೆ, ಹೆಚ್ಚಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕುಸ್ತಿ ಕ್ರೀಡೆಯನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದರು. ಕುಸ್ತಿ ಪೈಲ್ವಾನರ ನಿರ್ಮಾಣದಲ್ಲಿ ಗರಡಿ ಮನೆಗಳ ಪಾತ್ರ ಬಹುಮುಖ್ಯವಾಗಿದೆ. ಈ ದಿಸೆಯಲ್ಲಿ ಹಬ್ಬ ಹರಿದಿನಗಳಲ್ಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ಜತೆಗೆ ಗರಡಿ ಮನೆ ಮೂಲಕ ಹೊಸ ಹೊಸ ಪೈಲ್ವಾನರನ್ನು ಸಿದ್ಧಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸಿ, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವುದಾಗಿ ತಿಳಿಸಿದರು. ಹಿರಿಯ ಪೈಲ್ವಾನರಾದ ಹವಳಪ್ಪ, ಮಂಜಪ್ಪ, ತಿಪ್ಪಣ್ಣ, ನಿಂಬಣ್ಣ, ಸುರೇಶಣ್ಣ, ನಾರಾಯಣಪ್ಪ, ಗಣೇಶ್ ಪಾರಿವಾಳ, ಬೆಣ್ಣೆ ಬಸವರಾಜಪ್ಪ, ಪ್ರಶಾಂತ್ ಸಾಳಂಕೆ, ಸಂತೋಷ, ಫಕ್ಕೀರಪ್ಪ, ಬೆಣ್ಣೆ ಸತೀಶ್ ಮತ್ತಿತರರು ಉಪಸ್ಥಿತರಿದ್ದರು. - - - -16ಕೆ.ಎಸ್.ಕೆ.ಪಿ 1: ಶಿಕಾರಿಪುರದ ಪ್ರಸಿದ್ಧ ಶ್ರೀ ದೊಣ್ಣೆರಾಯನ ಗರಡಿಮನೆ ಅಧ್ಯಕ್ಷರಾಗಿ ಆಯ್ಕೆಯಾದ ಪೈಲ್ವಾನ್ ಬೆಣ್ಣೆ ಶಿವರಾಜ್ ಅವರನ್ನು ಅಭಿನಂದಿಸಲಾಯಿತು.