ಸಾರಾಂಶ
ಕೊರೋನಾ ಹಾವಳಿ ಮಧ್ಯೆ ಜಿಲ್ಲೆಯಲ್ಲಿ ಮಂಗನಕಾಯಿಲೆ (ಕೆಎಫ್‌ಡಿ) ಸಹ ಕೆಲವು ಗ್ರಾಮಗಳಲ್ಲಿ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಮಧ್ಯೆ ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಪಂನ ಬೊಪ್ಪನಮನೆ ಗ್ರಾಮದಲ್ಲಿ ಯುವತಿಯಲ್ಲಿ ಕೆಎಫ್‌ಡಿ ಸೋಂಕು ಕಂಡುಬಂದಿದ್ದು, ಮಣಿಪಾಲ್ ಆಸ್ಪತ್ರೆಗೆ ಸೇರಿಸುವಂತಾಗಿದೆ.
ಹೊಸನಗರ: ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಪ್ಪನಮನೆ ಗ್ರಾಮದ 18 ವರ್ಷದ ಯುವತಿಗೆ ಕೆಎಫ್‌ಡಿ ಸೋಂಕು ಪತ್ತೆಯಾಗಿದೆ.
ಯುವತಿಗೆ ಡಿ.29ರಂದು ಜ್ವರ ಕಾಣಿಸಿಕೊಂಡಿದೆ. ನಗರದ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ಜ.1ರಂದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಲಿಸಿದ್ದು, ಅಲ್ಲಿ ಕೆಎಫ್‌ಡಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ಪಾಸಿಟ್ ಬಂದಿರಲಿಲ್ಲ. ಆದರೂ ಜ್ವರ ಕಡಿಮೆಯಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಆರ್‌ಟಿಸಿಪಿಆರ್ ಪರೀಕ್ಷೆಗೆ ನಡೆಸಿದಾಗ ಕೆಎಫ್‌ಡಿ ಪಾಸಿಟಿವ್ ಬಂದಿದೆ. ಇವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಐಸಿಯುನಲ್ಲಿರಿಸಿ ಚಿಕಿತ್ಸೆಗೆ ನೀಡಿದ್ದಾರೆ. ಆದರೂ ಆರೋಗ್ಯ ಪರಿಸ್ಥಿತಿ ಸುಧಾರಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಸಂಜೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.ಜಿಲ್ಲೆಯಲ್ಲಿ ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಇದಾಗಿದ್ದು, ಕಳೆದ ಡಿ.13ರಂದು ತೀರ್ಥಹಳ್ಳಿ ತಾಲೂಕಿನ ಅತ್ತಿಸರ ಗ್ರಾಮದ 53 ವರ್ಷದ ಮಹಿಳೆಗೆ ಕೆಎಫ್‌ಡಿ ಪತ್ತೆಯಾಗಿತ್ತು.