ಸಾರಾಂಶ
ಯುವತಿಯರು ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್ಸ್ ಕಲೆಯನ್ನು ಕಲಿಯುವ ಅಗತ್ಯವಿದ್ದು, ಈ ಮೂಲಕ ಸ್ವರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯುವಪೀಳಿಗೆ ಮುಂದಾಗಬೇಕೆಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಕರೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿಯುವತಿಯರು ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್ಸ್ ಕಲೆಯನ್ನು ಕಲಿಯುವ ಅಗತ್ಯವಿದ್ದು, ಈ ಮೂಲಕ ಸ್ವರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯುವಪೀಳಿಗೆ ಮುಂದಾಗಬೇಕೆಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಕರೆ ನೀಡಿದ್ದಾರೆ.
ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಶಿಕ್ಷಣ ಸಂಸ್ಥೆಯ 40ನೇ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿರ್ಭೀತಿಯಿಂದ ಜೀವನ ಸಾಗಿಸಲು ಇಂದಿನ ದಿನಗಳಲ್ಲಿ ಸ್ವರಕ್ಷಣೆಗಾಗಿ ಮಾರ್ಷಲ್ ಕಲೆಯನ್ನು ತಿಳಿದುಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಯುವತಿಯರು ಮಾರ್ಷಲ್ ಆರ್ಟ್ಸ್‌ನಲ್ಲಿ ತರಬೇತಿ ಪಡೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.ಮಡಿಕೇರಿ ಸೇರಿದಂತೆ ಕೊಡಗಿನ ಪರಿಸರ ಇತ್ತೀಚಿನ ವರ್ಷಗಳಲ್ಲಿ ಮಾಲಿನ್ಯದಿಂದ ಹಾಳಾಗುತ್ತಿದೆ. ನಿಸರ್ಗ ಸೌಂದರ್ಯಕ್ಕೆ ಹೆಸರಾದ ಮಡಿಕೇರಿ ಕಾಂಕ್ರೀಟ್ ಕಾಡಾಗುತ್ತಿದೆ. ಯುವಜನಾಂಗ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ಹರಿಸಿ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದ ನಿವೃತ್ತ ಏರ್ ಮಾರ್ಷಲ್, 2018ರಲ್ಲಿ ಸಂಭವಿಸಿದ ಭೂಕುಸಿತ ಖಂಡಿತವಾಗಿಯೂ ದೇವರ ಅಥವಾ ವಿಧಿಯ ಸೃಷ್ಟಿಯಲ್ಲ, ಇದು ಮಾನವನ ದುರಾಸೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪವಾಗಿದ್ದು, ಆ ದುರಂತದಿಂದ ನಾವೆಲ್ಲರೂ ಎಚ್ಚರಿಕೆಯ ಪಾಠ ಕಲಿತು ಪ್ರಕೃತಿ ಸಂರಕ್ಷಣೆಯತ್ತ ಗಮನ ಹರಿಸಲೇಬೇಕಾಗಿದೆ ಎಂದು ಕಿವಿಮಾತು ಹೇಳಿದರು.ಪ್ರತೀಯೋರ್ವರಿಗೂ ದೇಶ ಮೊದಲ ಪ್ರಾಶಸ್ತ್ಯ ಆಗಿರಬೇಕು. ನಂತರವೇ ತನ್ನ ಸುಖ, ಸಂತೋಷ ಇರಬೇಕು. ದೇಶ ಸುರಕ್ಷಿತವಾಗಿ ಇದ್ದರೆ ಮಾತ್ರ ತನ್ನ ಜೀವನ ಕೂಡ ನೆಮ್ಮದಿಯಿಂದ ಇರಲು ಸಾಧ್ಯ ಎಂಬುದನ್ನು ಯಾರೂ ಮರೆಯಬಾರದು. ಕೊಡಗು ವಿದ್ಯಾಲಯ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ವಿಚಾರ ತಿಳಿಹೇಳುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.ತಾನು ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ಗಣಿತದಲ್ಲಿ ಕಡಮೆ ಅಂಕ ಪಡೆಯುತ್ತಿದ್ದೆ ಎಂದು ಸ್ಮರಿಸಿಕೊಂಡ ಕಾರ್ಯಪ್ಪ, ಈ ಸಂದರ್ಭ ತನ್ನ ತಂದೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಸಿ.ವಿ.ಶಂಕರ್ ಅವರ ಮನೆಗೆ ತೆರಳಿ ತನ್ನ ಮಗನಿಗೆ ಗಣಿತ ಶಿಕ್ಷಣ ನೀಡಿ ಎಂದು ವಿನಂತಿಸಿದರು. ಅಂತೆಯೇ ಸಿ.ವಿ.ಶಂಕರ್ ಅವರು ಗಣಿತದಲ್ಲಿ ತನಗೆ ಶಿಕ್ಷಣ ನೀಡಿದ ಪರಿಣಾಮ ನಂತರ ಉತ್ತಮ ಶಿಕ್ಷಣ ಪಡೆದು ಸೇನಾಪಡೆಯಲ್ಲಿಯೂ ಒಳ್ಳೆಯ ಪದವಿ ಪಡೆಯಲು ಸಾಧ್ಯವಾಯಿತು ಎಂದೂ ಹೇಳಿದರು.ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್.ಸುಮಿತ್ರಾ ಶಾಲಾ ವರದಿ ವಾಚಿಸಿ, ಸತತ 16 ವರ್ಷಗಳ ಕಾಲ ಶಾಲೆಯು 10ನೇ ತರಗತಿಯಲ್ಲಿ ಶೇ.100 ಫಲಿತಾಂಶ ಗಳಿಸುತ್ತಾ ಬಂದಿದೆ. ಸಂಸ್ಥೆಯ 60 ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸಹಕಾರ ಇದಕ್ಕೆ ಕಾರಣವಾಗಿದೆ ಎಂದು ಸ್ಮರಿಸಿಕೊಂಡರು.ಕೊಡಗು ವಿದ್ಯಾಲಯದಲ್ಲಿ 28 ವರ್ಷಗಳಿಂದ ಎನ್.ಸಿ.ಸಿ. ತರಬೇತುದಾರರಾಗಿರುವ ದಾಮೋದರ್, ಕ್ರೀಡಾ ತರಬೇತು ದಾರ ಡಿ.ಜೆ. ದಿನೇಶ್ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಗಣ್ಯರು ಸನ್ಮಾನಿಸಿ ಗೌರವಿಸಿದರು.ವೇದಿಕೆಯಲ್ಲಿ ಶಾಲಾ ಕ್ರೀಡಾ ಸಮಿತಿ ಅಧ್ಯಕ್ಷ ರಘು ಮಾದಪ್ಪ, ಶಾಲಾ ನಿರ್ದೇಶಕರಾದ ಉಮಿ೯ಳಾ ಮುದ್ದಯ್ಯ, ಬಿ.ಎಸ್.ಪೂಣಚ್ಚ, ಸಿ.ಎಸ್.ಗುರುದತ್, ನೀತಾದೇವಯ್ಯ, ಆಪರ್ಚ್ಯುನಿಟಿ ಶಾಲೆಯ ಟ್ರಸ್ಟಿ ಮೀನಾ ಕಾರ್ಯಪ್ಪ, ಪ್ರಮುಖರಾದ ವೀಣಾ ಚಂಗಪ್ಪ, ಗೀತಾಶ್ರೀಧರ್, ಕೊಡಗು ವಿದ್ಯಾಲಯದ ಆಡಳಿತ ವ್ಯವಸ್ಥಾಪಕ ಕೆ.ರವಿ ಸೇರಿದಂತೆ ಅನೇಕರಿದ್ದರು. ವಿದ್ಯಾರ್ಥಿಗಳಾದ ಯಾನ ಪೊನ್ನಮ್ಮ, ಪೂಜಿತ್ ನಿರೂಪಿಸಿ. ಪೂಜ್ಯ ಪೊನ್ನಮ್ಮ ಸ್ವಾಗತಿಸಿ, ಕೃತಿ ವಂದಿಸಿದರು.ಕೊಡಗು ವಿದ್ಯಾಲಯದ ಅಪರ್ಚ್ಯುನಿಟಿ ಶಾಲೆಯ ವಿಶೇಷ ಚೇತನ ಮಕ್ಕಳ ನೃತ್ಯ ಮನಮುಟ್ಟುವಂತಿತ್ತು. ಅಂತೆಯೇ ಕೊಡಗು ವಿದ್ಯಾಲಯದ ನೂರಾರು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾದ್ಯಗೋಷ್ಟಿ, ಪಥಸಂಚಲನ ಜರುಗಿತು.