Young writers should provide good books to society.
-ಮಳಖೇಡದ ಸಜ್ಜಾದೆ ಸಯ್ಯದ ಮುಸ್ತಾಫಾ ಖಾದ್ರಿ ಸಾಹೇಬ ಸಲಹೆ । ಲೇಖಕ ಇಲಿಯಾಸ ಪಟೇಲ ಚೊಚ್ಚಲ ಕೃತಿ ‘ಅತಿಥಿ ಹೃದಯ’ ಲೋಕಾರ್ಪಣೆ
-----ಕನ್ನಡಪ್ರಭ ವಾರ್ತೆ ಕೆಂಭಾವಿ
ಸಮಾಜದಲ್ಲಿ ಸಾಮರಸ್ಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಾರುವ ಉತ್ತಮ ಸಾಹಿತ್ಯ ಇಂದಿನ ಯುವ ಸಾಹಿತಿಗಳಿಂದ ಹೆಚ್ಚು ಮೂಡಿ ಬರಬೇಕಿದೆ ಎಂದು ಮಳಖೇಡದ ಸಜ್ಜಾದೆ ಸಯ್ಯದ ಮುಸ್ತಾಫಾ ಖಾದ್ರಿ ಸಾಹೇಬ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನ ಹಾಗೂ ತೈಸೀನ್-ತಸ್ಲೀಮ್ ಗ್ರಂಥಮಾಲೆ ಪ್ರಕಾಶನ ಇವುಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಲೇಖಕ ಇಲಿಯಾಸ ಪಟೇಲ ನಾಲತವಾಡ ಅವರ ಚೊಚ್ಚಲ ಕೃತಿ ‘ಅತಿಥಿ ಹೃದಯ’ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶಿರ್ವಚನ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಅಶ್ಲೀಲ ಸಾಹಿತ್ಯವು ಸಮಾಜ ಮತ್ತು ಸಂಸ್ಕೃತಿಗೆ ಮಾರಕವಾಗಿದೆ ಇದನ್ನು ಹೋಗಲಾಡಿಸಲು ಯುವ ಸಾಹಿತಿಗಳು ತಮ್ಮ ಬರವಣಿಗೆಯ ಮೂಲಕ ಉತ್ತಮ ಸಾಹಿತ್ಯದ ಪುಸ್ತಕಗಳನ್ನು ಸಮಾಜಕ್ಕೆ ನೀಡಬೇಕು ಎಂದು ಹೇಳಿದರು.
ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಸುತ್ತಿದ್ದು ಯುವ ಜನತೆಯಲ್ಲಿ ಸಂಸ್ಕಾರ ಕಣ್ಮರೆಯಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಗೆಯಾಗಿದೆ. ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ಬರಹಗಾರರು ಇನ್ನಷ್ಟು ಎತ್ತಿ ಹಿಡಿಯಬೇಕೆಂದು ಆಶಿಸಿದರು.ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಂದಗಿ ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಮ್. ಪಾಟೀಲ ಗಣಹಾರ, ಸಮಾಜದಲ್ಲಿ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಉತ್ತಮ ಕೃತಿಗಳು ಹೊರ ಬರಬೇಕು, ಕೇವಲ ಮೋಬೈಲ್‌ಗಳಲ್ಲಿ ಓದದೆ ಕೈಯ್ಯಲ್ಲಿ ಪುಸ್ತಕ ಹಿಡಿದು ಓದಿದಾಗ ಮಾತ್ರ ಸಾಹಿತ್ಯದ ರುಚಿ ಮನಸ್ಸಿಗೆ ಮುಟ್ಟಲು ಸಾಧ್ಯ ಎಂದ ಅವರು ಪತ್ರಕರ್ತರಾಗಿ ಲೇಖಕರಾಗಿ ತಮ್ಮ ಚೊಚ್ಚಲ ಕೃತಿ ಪ್ರಕಟಿಸಿದ ಯುವ ಲೇಖಕ ಇಲಿಯಾಸ್ ಪಟೇಲ್ ಅವರ ಸಾಹಿತ್ಯದ ಪಯಣ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದರು.
ಸಾಹಿತಿ ನಿಂಗನಗೌಡ ದಾಸಾಯಿ ಕೃತಿ ಪರಿಚಯ ಮಾಡಿದರು. ಇದೇ ಸಂದರ್ಭದಲ್ಲಿ ಶನಿವಾರ ನಿಧನರಾದ ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಡಲಾಯಿತು.ಪೀಠಾಧಿಪತಿ ಶ್ರೀಚನ್ನಬಸವ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಮಕ್ತುಮ್ ಪಟೇಲ, ಚಂದ್ರಶೇಖರ ಸ್ವಾಮಿ, ಅಯೂಬ್ ಪಟೇಲ, ಬಂದೇನವಾಜ ನಾಶಿ, ಬಂದೇನವಾಜ ನಾಲತವಾಡ, ಮಹಿಬೂಬ ವಡಕೇರಿ, ಗುರುರಾಜ ಕುಲಕರ್ಣಿ ಇದ್ದರು. ಲೇಖಕಿ ಇಲಿಯಾಸ್ ಪಟೇಲ್ ಬಳಗಾನೂರ ಸ್ವಾಗತಿಸಿದರು, ಡಾ. ಯಂಕನಗೌಡ ಪಾಟೀಲ ನಿರೂಪಣೆ ಮಾಡಿದರು.
ಚಿತ್ರ ೧೨ಕೆಇಎಮ್೧ಕೆಂಭಾವಿಯಲ್ಲಿ ಲೇಖಕ ಇಲಿಯಾಸ್ ಪಟೇಲ ನಾಲತವಾಡ ಅವರ ಚೊಚ್ಚಲ ಕೃತಿ ‘ಅತಿಥಿ ಹೃದಯ’ ಪುಸ್ತಕವನ್ನು ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಮ್. ಪಾಟೀಲ ಗಣಹಾರ, ಲೋಕಾರ್ಪಣೆಗೊಳಿಸಿದರು.