ಸಾರಾಂಶ
ಕನಕಪುರ: ನಮ್ಮ ನಿರೀಕ್ಷೆಗೂ ಮೀರಿ ತಾಲೂಕಿನ ಜನತೆ ನಮಗೆ ಅಭೂತ ಪೂರ್ವ ಬೆಂಬಲ ನೀಡಿ ಡಾ.ಮಂಜುನಾಥ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಾ.ಮಂಜುನಾಥ್ ಅವರ ಪತ್ನಿ ಅನುಸೂಯ ತಿಳಿಸಿದರು.ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ಅಭೂತ ಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಮುಖ ದೇವಾಲಯಗಳಾದ ಕೊಟ್ಟಗಾಳು ಮಾರಮ್ಮ, ಕಬ್ಬಾಳಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ನಗರದ ಶಕ್ತಿ ದೇವತೆ ಶ್ರೀ ಕೆಂಕೇರಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ ಬಳಿಕ ನೆರೆದಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚುನಾವಣೆ ಸಮಯದಲ್ಲಿ ತಾಲೂಕಿನ ಜನತೆ ತೋರಿದ ಪ್ರೀತಿ, ವಿಶ್ವಾಸವನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ, ನಮ್ಮ ತಂದೆ ದೇವೇಗೌಡರು ಹಾಗೂ ಸಹೋದರ ಕುಮಾರಸ್ವಾಮಿಗೆ ಶಕ್ತಿ ನೀಡಿದ ಈ ತಾಲೂಕಿನ ಹಾಗೂ ಜಿಲ್ಲೆಯ ಜನರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಈಗ ನನ್ನ ಪತಿಯನ್ನು ತಾಲೂಕಿನ ಜನತೆ ತಮ್ಮ ಮನೆಯ ಮಗನಂತೆ ಕಾಣುವ ಮೂಲಕ ಅತಿಹೆಚ್ಚು ಮತಗಳನ್ನ ನೀಡಿ ಶಕ್ತಿ ತುಂಬಿದ್ದಾರೆ. ತಾಲೂಕಿನ ಹಾಗೂ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.ಲೋಕಸಭಾ ಚುನಾವಣೆ ಸಮಯದಲ್ಲಿ ತಾಲೂಕಿನ ಶಕ್ತಿ ದೇವತೆಗಳಲ್ಲಿ ನನ್ನ ಪತಿಗೆ ಹೆಚ್ಚು ಮತಗಳನ್ನು ದೊರಕಿಸಿ ಕೊಡುವಂತೆ ಬೇಡಿಕೊಂಡಿದ್ದೆ. ಅದರಂತೆ ಈ ಚುನಾವಣೆಯಲ್ಲಿ ಈ ಶಕ್ತಿ ದೇವತೆಗಳ ಆಶೀರ್ವಾದದಿಂದ ತಾಲೂಕಿನಲ್ಲಿ ಹೆಚ್ಚಿನ ಮತಗಳು ನಮ್ಮ ಪಕ್ಷಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು ದೇವತೆಗಳ ಹರಕೆ ತೀರಿಸಲು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ತಾಲೂಕಿನ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡು ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗುವ ಭರವಸೆ ನೀಡಿದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್, ಜೆಡಿಎಸ್ ಮುಖಂಡರಾದ ಸಿದ್ಧಮರೀಗೌಡ, ನಲ್ಲಹಳ್ಳಿ ಶಿವಕುಮಾರ್, ಪುಟ್ಟರಾಜು, ಮಂಜು ಕುಮಾರ್, ರಾಂಪುರ ರಾಮಕೃಷ್ಣ, ಚಿನ್ನಸ್ವಾಮಿ, ಪಂಚಲಿಂಗೇಗೌಡ, ಧನಂಜಯ, ನಗರಸಭಾ ಸದಸ್ಯ ಸ್ಟುಡಿಯೋ ಚಂದ್ರು, ಮಹಿಳಾ ಘಟಕದ ಶೋಭಾ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೋಟೆ ಕಿಟ್ಟಣ್ಣ, ಬೂದಿಗೂಪ್ಪೆ ಶಿವಲಿಂಗಯ್ಯ, ನಗರಸಭಾ ಸದಸ್ಯೆ ಮಾಲತಿ ಆನಂದ್, ಶಿವಮುತ್ತು, ಬೊಮ್ಮನಹಳ್ಳಿ ಕುಮಾರ್, ವರಲಕ್ಷ್ಮಿ, ಪ್ರಮೀಳಾ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನೂರಾರು ಕಾರ್ಯಕರ್ತರು ಹಾಜರಿದ್ದರು.ಬಾಕ್ಸ್.............ಹಾರೋಹಳ್ಳಿ ಭಾಗಕ್ಕೆ ಮೆಟ್ರೋಗೆ ಆದ್ಯತೆ
ಇನ್ಪೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ತಮ್ಮ ಫೌಂಡೇಶನ್ ವತಿಯಿಂದ ನಗರದಲ್ಲಿ ನಿರ್ಮಾಣ ಮಾಡಿರುವ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯ ವಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ಉಪಕರಣಗಳನ್ನು ಒದಗಿಸಿಕೊಡುವ ಕಡೆಗೆ ಮೊದಲು ಗಮನಹರಿಸಲಾಗುವುದು ಹಾಗೂ ಹಾರೋಹಳ್ಳಿ ಭಾಗಕ್ಕೆ ಮೆಟ್ರೋ ರೈಲನ್ನು ತರಲು ಆದ್ಯತೆ ನೀಡಲಾಗುವುದು ಎಂದು ಸಂಸದ ಡಾ.ಮಂಜುನಾಥ್ ಅವರ ಪತ್ನಿ ಅನುಸೂಯ ಅವರು ತಿಳಿಸಿದರು.ಮಾಜಿ ಪ್ರಧಾನಿ ದೇವೇಗೌಡರ ಕನಸಿನ ಕೂಸಾದ ಈ ಭಾಗದ ರೈಲ್ವೆ ಕಾಮಗಾರಿಯನ್ನು ಆರಂಭಿಸಲು ಒತ್ತು ನೀಡುವುದರ ಜೊತೆಗೆ ಸ್ಥಳೀಯವಾಗಿ ಯುವಕರಿಗೆ ಉದ್ಯೋಗವಕಾಶ, ತಾಲೂಕಿನ ಅಭಿವೃದ್ಧಿ ಕೆಲಸಗಳನ್ನ ಹಂತಹಂತವಾಗಿ ನನ್ನ ಪತಿಯ ಬೆನ್ನೆಲುಬಾಗಿ ನಿಂತು ನಡೆಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಕೆ ಕೆ ಪಿ ಸುದ್ದಿ 01:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನೂತನ ಸಂಸದ ಡಾ.ಮಂಜುನಾಥ್ ಅವರ ಪತ್ನಿ ಅನುಸೂಯ ಅವರು ಕನಕಪುರ ತಾಲೂಕಿನ ಶಕ್ತಿ ದೇವತೆಗಳ ದರ್ಶನ ಪಡೆದು ಹರಕೆ ನೆರವೇರಿಸಿದರು.