ರೈಲ್ವೆ ನಿಲ್ದಾಣ ಟ್ರ್ಯಾಕ್ ಸಮೀಪ ಶಾಂತಿನಗರದಲ್ಲಿ ಘಟನೆ । ಎಸ್‌ಪಿ ಭೇಟಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಯುವಕನೋರ್ವನ ತಲೆಗೆ ದುಷ್ಕರ್ಮಿಗಳು ಕಲ್ಲುಗಳಿಂದ ಹೊಡೆದು ಕೊಲೆಗೈದ ಘಟನೆ ನಗರದ ರೈಲ್ವೆ ನಿಲ್ದಾಣ ಟ್ರ್ಯಾಕ್ ಸಮೀಪ ಶಾಂತಿನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಕೊಲೆಯಾದ ಯುವಕನನ್ನು ನಗರದ ಟಿ.ಜಿ.ಟ್ಯಾಂಕ್ ರಸ್ತೆಯ ನಿವಾಸಿ ಇಸ್ಮಾಯಿಲ್ ಪಾಷಾ (27) ಎಂದು ಗುರುತಿಸಲಾಗಿದೆ.

ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ಇಸ್ಮಾಯಿಲ್ ಪಾಷಾ ಕಳೆದ 6-7 ವರ್ಷಗಳಿಂದ ಪೈಂಟ್ ಕೆಲಸದಲ್ಲಿ ತೊಡಗಿದ್ದ ಎನ್ನಲಾಗಿದೆ. ಗುರುವಾರ ರಾತ್ರಿ 8-30 ರ ಸಮಯದಲ್ಲಿ ಮನೆಯಿಂದ ಹೊರ ಹೋಗಿದ್ದವನು ತಡರಾತ್ರಿಯಾದರೂ ಬಂದಿರಲಿಲ್ಲ. ಶುಕ್ರವಾರ ಮಂಜಾನೆ 1.30ರಲ್ಲಿ ಪೋಲಿಸರು ಪೋನ್ ಮಾಡಿ ಇಸ್ಮಾಯಿಲ್ ಪಾಷಾ ಕೊಲೆಯಾಗಿರುವ ವಿಷಯ ತಿಳಿದಾಗಲೇ ಮನೆಯವರಿಗೆ ಸುದ್ದಿ ತಿಳಿದಿದೆ.


ಘಟನಾ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ನಗರ ಪೋಲಿಸ್ ಠಾಣಾ ಪೋಲಿಸರು ಭೇಟಿ ನೀಡಿ, ಸ್ಥಳಪರಿಶೀಲನೆ ನಡೆಸಿ ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಕೊಲೆಗೆ ಹಳೆಯ ದ್ವೇಷವೇನಾದರೂ ಇರ ಬಹುದಾ? ಕೊಲೆಯಲ್ಲಿ ಎಷ್ಟು ಜನ ಭಾಗಿಯಾಗಿರಬಹುದು ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸಿ,ಎಎಸ್ ಪಿ ಜಗನ್ನಾಥರೈ. ಡಿವೈಎಸ್ ಪಿ ಪ್ರಕಾಶ್, ಬೆಂಗಳೂರು ದಂಡು ರೈಲ್ವೆಯ ಸರ್ಕಲ್ ಇನ್‌ಸ್ಪೆಕ್ಟರ್ ವೀರಣ್ಣ.ಎಸ್. ಮಗಿ, ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ್. ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಮರ್ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಿಕೆಬಿ-1 ಮೃತ ಇಸ್ಮಾಯಿಲ್ ಪಾಷಾ