ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಗೊಂಡು ಏಳು ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ನವ ವಸಂತ, ಯುವ ಸಂಭ್ರಮ ಹಾಗೂ ನೂತನ ಮುಖ್ಯ ಪ್ರವೇಶದ್ವಾರದ ಉದ್ಘಾಟನಾ ಕಾರ್ಯಕ್ರಮ ಏ.೩೦ರಂದು ಬೆಳಗ್ಗೆ ೧೦ ಗಂಟೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವಿಶ್ವವಿದ್ಯಾಲಯ ಸ್ಥಾಪನೆಗೊಂಡು ಏಳು ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ನವ ವಸಂತ, ಯುವ ಸಂಭ್ರಮ ಹಾಗೂ ನೂತನ ಮುಖ್ಯ ಪ್ರವೇಶದ್ವಾರದ ಉದ್ಘಾಟನಾ ಕಾರ್ಯಕ್ರಮ ಏ.೩೦ರಂದು ಬೆಳಗ್ಗೆ ೧೦ ಗಂಟೆಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಶಾಸಕ ಪಿ.ರವಿಕುಮಾರ್ ಹೇಳಿದರು.

ಉದ್ಘಾಟನೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸುವರು. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಆಗಮಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ ೯.೩೦ ರಿಂದ ೧೧ ಗಂಟೆಯವರೆಗೆ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಂದ ಜನಪದ ಗೀತೆ, ಭರತನಾಟ್ಯ, ಸಮೂಹ ನೃತ್ಯ, ಸೋಲೋನೃತ್ಯ, ಗಾಯನ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ೧೧ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ೨.೫೦ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಪ್ರವೇಶದ್ವಾರವನ್ನು ಉದ್ಘಾಟಿಸಲಾಗುವುದು. ಇದೇ ಸಮಯದಲ್ಲಿ ೨ ಕೋಟಿ ರು. ವೆಚ್ಚದಲ್ಲಿ ಅರ್ಧಕ್ಕೆ ನಿಂತಿರುವ ಒಳಾಂಗಣ ಕ್ರೀಡಾಂಗಣವನ್ನು ಪೂರ್ಣಗೊಳಿಸಲಾಗುವುದು ಎಂದರು.

ವೇದಿಕೆ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ೧ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಪಾಪ್‌ಸಿಂಗರ್ ಚಂದನ್‌ಶೆಟ್ಟಿಯಿಂದ ಗಾಯನ, ನೃತ್ಯ ನಿರ್ದೇಶಕ ನಾಗೇಂದ್ರಪ್ರಸಾದ್ ಹಾಗೂ ಕಿಶನ್ ಬೀಳಗಲಿ ಅವರಿಂದ ನೃತ್ಯಪ್ರದರ್ಶನಗಳು ನಡೆಯಲಿವೆ ಎಂದರು.

ಯುವ ಸಂಭ್ರಮ ಕಾರ್ಯಕ್ರಮವನ್ನು ೫೦ ಲಕ್ಷ ರು. ವೆಚ್ಚದಲ್ಲಿ ಏರ್ಪಡಿಸಲಾಗಿದೆ. ೧೫ ರಿಂದ ೧೮ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿವಿಧ ತಾಲೂಕುಗಳಿಂದ ವಿದ್ಯಾರ್ಥಿಗಳನ್ನು ಕರೆತರುವುದಕ್ಕೆ ೪೦ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೂ ಮುಕ್ತ ಪ್ರವೇಶವಿದ್ದು, ಯಾರು ಬೇಕಾದರೂ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದರು.

ಹಿಂದಿನ ಸರ್ಕಾರ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ತರಾತುರಿಯಲ್ಲಿ ಎಂಟು ವಿಶ್ವವಿದ್ಯಾನಿಲಯಗಳನ್ನು ರಾಜ್ಯದಲ್ಲಿ ಆರಂಭಿಸಿತು. ಎಂಟು ವಿವಿಗಳ ಪೈಕಿ ಮಂಡ್ಯ ವಿಶ್ವವಿದ್ಯಾನಿಲಯ ಉತ್ತಮ ಸ್ಥಿತಿಯಲ್ಲಿದೆ. ಆಂತರಿಕ ಸಂಪನ್ಮೂಲದಿಂದ ಸಮರ್ಪಕವಾಗಿ ಮುನ್ನಡೆಯುತ್ತಿದೆ. ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳವಣಿಗೆ ಸಾಧಿಸಿದೆ ಎಂದರು.

ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಸೇರಿದ ಆಸ್ತಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ವಿಶ್ವವಿದ್ಯಾಲಯದ ಆಸ್ತಿ ಕೈತಪ್ಪಿಹೋಗದಂತೆ ಸಂರಕ್ಷಣೆ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ, ಕುಲಸಚಿವ (ಮೌಲ್ಯಮಾಪನ) ಪ್ರೊ.ಜಿ.ವಿ.ವೆಂಕಟರಮಣ, ಕುಲಸಚಿವ ಎಂ.ಪಿ.ಕೃಷ್ಣಕುಮಾರ್ ಇದ್ದರು.