ಮೈಕ್ರೋ ಫೈನಾನ್ಸ್ ಕಂಪನಿ ಕಿರುಕುಳದಿಂದ ಯುವಕ‌ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಖಂಡಿಸಿ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಸದಸ್ಯರು ಮಂಗಳವಾರ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳದಿಂದ ಪಟ್ಟಣದ ಎನ್ಇಎಸ್ ಬಡಾವಣೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಡಾವಣೆಯ ಲೇ.ಮಹದೇವಯ್ಯ ಅವರ ಪುತ್ರ ಅಭಿಜಿತ್(22) ಸೋಮವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಂದೆ ನಿಧನದ ನಂತರ ಕುಟುಂಬದ ನಿರ್ವಹಣೆ ಮಾಡುತ್ತಿದ್ದ ಯುವಕ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ₹5 ಲಕ್ಷ ಸಾಲ ಪಡೆದಿದ್ದ ಎನ್ನಲಾಗಿದೆ. ಹಲವು ತಿಂಗಳಿಂದ ಸರಿಯಾಗಿ ಸಾಲದ ಕಂತು ಕಟ್ಟುತ್ತಿದ್ದ ಅಭಿಜಿತ್ ಈ ತಿಂಗಳ ಕಂತು ಕಟ್ಟಿರಲಿಲ್ಲ. ಇದ್ದರಿಂದ ಕಂಪನಿಯ ಸಿಬ್ಬಂದಿ ಪೋನ್ ಕರೆ ಮಾಡಿ ಗಲಾಟೆ ಮಾಡುವ ಬೆದರಿಕೆ ಹಾಕುತ್ತಿದ್ದರಿಂದ ಮನ ನೊಂದು ತನ್ನ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಯುವಕನ ಸಹೋದರ ದೂರು ನೀಡಿದ್ದಾನೆ.

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಲಿತ ಸಂಘಟನೆಗಳಿಂದ ಪ್ರತಿಭಟನೆ:

ಮೈಕ್ರೋ ಫೈನಾನ್ಸ್ ಕಂಪನಿ ಕಿರುಕುಳದಿಂದ ಯುವಕ‌ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಖಂಡಿಸಿ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಸದಸ್ಯರು ಮಂಗಳವಾರ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚುತ್ತಿದೆ. ಮೃತ ಅಭಿಜಿತ್ ಸೇರಿದಂತೆ ಅನೇಕ ಪ್ರಕರಣಗಳು ಮಿತಿ ಮೀರಿದೆ. ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.