ಸಾರಾಂಶ
ಕುಮಟಾ: ಪತ್ರಿಕಾರಂಗವು ಪತ್ರಿಕೋದ್ಯಮವಾಗಿ ಬದಲಾದ ನಂತರ ಅದರ ವಿಶ್ವಾಸಾರ್ಹತೆ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಹಳಿ ತಪ್ಪುತ್ತಿರುವ ಸೂಚನೆ ಹೊಂದಿದೆ. ಇಂದು ಪತ್ರಿಕೆಗಳನ್ನು ಓದುತ್ತಿರುವವರಲ್ಲಿ ಹೆಚ್ಚಿನವರು ವಯಸ್ಸಾದವರೆ ಹೊರತು, ಯುವಸಮುದಾಯ ಪತ್ರಿಕೆ ಓದಿನಿಂದ ದೂರವೇ ಇರುವುದು ಬೇಸರದ ಸಂಗತಿ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ವಿಷಾದಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವ ನಿಮಿತ್ತ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಜಿಲ್ಲೆ ಸಾಕಷ್ಟು ಪ್ರತಿಭಾವಂತ ಪತ್ರಕರ್ತರನ್ನು ಕಂಡಿದೆ. ಐವತ್ತು ವರ್ಷದ ಹಿಂದೆಯೇ ಪತ್ರಕರ್ತರ ಸಂಘಟನೆಯ ಅಗತ್ಯವರಿತು ಸ್ಥಾಪಿಸಿದವರು ಸ್ಮರಣೀಯರು. ಪತ್ರಕರ್ತರ ಸಂಘಟನೆಯ ನಂತರದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಘಟನೆಗಳು ಕಡಿಮೆಯಾಗಿದ್ದು, ಪತ್ರಕರ್ತರಿಗೆ ಶಕ್ತಿ ತುಂಬಿದೆ ಎಂದರು. ಸಮಾಜವನ್ನು ಒಳಗೊಂಡಂತೆ ಮಾಧ್ಯಮ ಕುರಿತು ಉಪನ್ಯಾಸ ಮಾಡಿದ ಚಿದಾನಂದ ಭಂಡಾರಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾ ರಂಗದಲ್ಲಿರುವ ಪತ್ರಕರ್ತರ ಕುರಿತು ನಾವು ಏನು ಮಾಡಿದ್ದೇವೆ ಎಂಬುದರ ಕುರಿತು ಸರ್ಕಾರ ಚಿಂತನೆ ಮಾಡಬೇಕಾಗಿದೆ. ಪತ್ರಕರ್ತರಿಗೆ ಜೀವವಿಮೆ, ಉಚಿತ ಪ್ರಯಾಣ, ಪಿಂಚಣಿ ಇನ್ನಿತರ ಅನುಕೂಲ ನೀಡಿದೆಯೇ? ಪತ್ರಕರ್ತರಿಗೆ ಯಾವುದೇ ಸವಲತ್ತು ಇಲ್ಲ. ಮೊದಲು ಪತ್ರಿಕಾ ಧರ್ಮ ಎನ್ನುವುದು ಇತ್ತು. ನಂತರದಲ್ಲಿ ಪತ್ರಿಕಾ ರಂಗವಾಯಿತು, ಈಗ ಪತ್ರಿಕೋದ್ಯಮವಾಗಿದೆ. ನಮಗೆ ಕಾಣುವುದಕ್ಕಿಂತಲೂ ಒಳಗಿನ ವಿಚಾರಗಳನ್ನು ತಿಳಿಸಿಕೊಡುವ ಮಾಧ್ಯಮ ಇಂದು ಅದೆಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಗೆಯೇ ಭವಿಷ್ಯವನ್ನು ಉತ್ತಮಗೊಳಿಸಲು ವಿದ್ಯಾರ್ಥಿಗಳು ದಿನದ ಒಂದು ತಾಸಾದರೂ ಪತ್ರಿಕೆಗಳನ್ನು ಓದಬೇಕು ಎಂದರು. ಮುಖ್ಯ ಅತಿಥಿ ಪ್ರಾಚಾರ್ಯೆ ವಿಜಯಾ ನಾಯ್ಕ ಮಾತನಾಡಿ, ಮೊಬೈಲ್ ಪೋನ್‌ಗಳು ನಮ್ಮನ್ನು ಆಳುತ್ತಿವೆ. ವಿದ್ಯಾರ್ಥಿಗಳಲ್ಲಿ ಕೇಳುವ ಮನಸ್ಥಿತಿ ಮಾಯವಾಗಿದೆ. ಹೀಗಾಗಿ ಅವರಿಗೆ ಶಿಕ್ಷಣವನ್ನು ತುರುಕಬೇಕಾಗಿದೆ. ಇಂದು ಪ್ರಾಮಾಣಿಕತೆ ಎಲ್ಲಿದೆ ಎಂಬುದನ್ನು ಹುಡುಕಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಪತ್ರಿಕೋದ್ಯಮ ಎಂಬುದು ಪತ್ರಿಕಾ ಧರ್ಮವಾಗಿ ಪರಿವರ್ತನೆಗೊಳ್ಳಲಿ ಎಂದರು. ಮುಖ್ಯ ಅತಿಥಿಯಾಗಿ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ ಮಾತನಾಡಿ, ನ್ಯಾಯಾಂಗವನ್ನು ಹೊರತುಪಡಿಸಿ ನಮ್ಮ ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಎಲ್ಲ ವ್ಯವಸ್ಥೆಯನ್ನು ರಾಜಕೀಯಸ್ಥರು ಭ್ರಷ್ಟವಾಗಿಸಿದ್ದಾರೆ. ನ್ಯಾಯಾಂಗ ಭ್ರಷ್ಟವಾಗದಂತೆ ನೋಡಿಕೊಳ್ಳಲು ಪತ್ರಕರ್ತರು, ವಿದ್ಯಾರ್ಥಿಗಳು ಸದಾ ಜಾಗೃತರಾಗಿರಬೇಕು ಎಂದರು. ಸಂಘದ ತಾಲೂಕಾಧ್ಯಕ್ಷ ಎಂ.ಜಿ. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸಮಾಜದ ಹಿತಕ್ಕಾಗಿ ಜಾಗೃತರಾಗಿದ್ದರೆ ಪತ್ರಿಕಾರಂಗದೊಟ್ಟಿಗೆ ಎಲ್ಲ ಕ್ಷೇತ್ರಗಳು ಬಲಿಷ್ಟವಾಗಿ ಉಳಿಯಲಿದೆ ಎಂದರು.
ವಿದ್ಯಾರ್ಥಿನಿ ಭಾವನಾ ಪ್ರಾರ್ಥಿಸಿದರು. ಜಯದೇವ ಬಳಗಂಡಿ ಸ್ವಾಗತಿಸಿದರು. ಗಣೇಶ ಜೋಶಿ ನಿರೂಪಿಸಿದರು. ಚರಣ ನಾಯ್ಕ ವಂದಿಸಿದರು.