ಗುಡಿಬಂಡೆ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದಿರುವ ಅವಮಾನಕರ ಘಟನೆಗೆ ಯುವ ಕಾಂಗ್ರೆಸ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸಿದರೆ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಶಾಸಕ ಪ್ರದೀಪ್ ಈಶ್ವರ್ ಕಾರ್ಯನಿರ್ವಹಿಸುತ್ತಿದ್ದು, ಅವರ ಬೆಳವಣಿಗೆಯನ್ನು ಸಹಿಸದ ಕೆಲವರು ಇಂತಹ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಿಗೆ ಪ್ರಶ್ನೆ ಮಾಡುವ ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ವಿರೋಧ ಪಕ್ಷಗಳನ್ನು ಪ್ರಶ್ನಿಸಿದ ಕಾರಣಕ್ಕೆ ಶಾಸಕರ ಮೇಲೆ ದಾಳಿ ನಡೆಸುವುದು ಅಥವಾ ಅವಮಾನ ಮಾಡುವುದು ಯಾವುದೇ ರೀತಿಯಿಂದಲೂ ಸಮರ್ಥನೀಯವಲ್ಲ. ಶಾಸಕ ಪ್ರದೀಪ್ ಈಶ್ವರ್ ಅವರ ಪರವಾಗಿ ಯುವ ಕಾಂಗ್ರೆಸ್ ಸದಾ ನಿಲ್ಲಲಿದೆ. ಅವರು ಯಾವುದೇ ಕಾರಣಕ್ಕೂ ಎದೆಗುಂದುವ ಅಗತ್ಯವಿಲ್ಲ ಎಂದು ರಮೇಶ್ ಹೇಳಿದರು.

ಇದೇ ವೇಳೆ ಮಾತನಾಡಿದ ಪಿಎಲ್ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪ್ರಕಾಶ್, ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ನಡೆದಿರುವ ಘಟನೆ ಖಂಡನೀಯ. ರಾಜಕೀಯವನ್ನು ಚುನಾವಣಾ ಸಂದರ್ಭದಲ್ಲಿ ಮಾಡಬೇಕು. ಚುನಾವಣೆ ಮುಗಿದ ನಂತರ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಕೆಂಪೇಗೌಡ ಜಯಂತಿಯಂತಹ ಸರ್ಕಾರಿ ಕಾರ್ಯಕ್ರಮದಲ್ಲಿ ನಡೆದಿರುವ ಈ ಘಟನೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತದ್ದು. ಸಂವಿಧಾನಬದ್ಧವಾಗಿ ಪ್ರಶ್ನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಪಪಂ ಅಧ್ಯಕ್ಷ ವಿಕಾಸ್, ಹಿರಿಯ ಕಾಂಗ್ರೆಸ್ ಮುಖಂಡ ಕೃಷ್ಣೇಗೌಡ, ಯುವ ಕಾಂಗ್ರೆಸ್ ಮುಖಂಡರಾದ ಅಂಬರೀಶ್, ನವೀನ್ ರಾಜ್ ಕನ್ನಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.

28ಜಿಯುಡಿ2:


ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದಿರುವ ಅವಮಾನಕರ ಘಟನೆಗೆ ಸಂಬಂಧಿಸಿದಂತೆ ಗುಡಿಬಂಡೆ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.