ಸಾರಾಂಶ
ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು, ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಸೇರಿದಂತೆ 120ಕ್ಕೂ ಹೆಚ್ಚು ಅಪೇಕ್ಷಿತರು ಭಾಗವಹಿಸಲಿದ್ದಾರೆ.
ಹುಬ್ಬಳ್ಳಿ:
ನಗರದಲ್ಲಿ ಇಂದಿನಿಂದ (ಜು.12) ಮೂರು ದಿನ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಮಟ್ಟದ ಯುವ ವಿಕಾಸ ಶಿಬಿರ ನಡೆಯಲಿದೆ.ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಶಿಬಿರದಲ್ಲಿ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು, ಎಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಸೇರಿದಂತೆ 120ಕ್ಕೂ ಹೆಚ್ಚು ಅಪೇಕ್ಷಿತರು ಭಾಗವಹಿಸಲಿದ್ದಾರೆ ಎಂದು ಮಹಾನಗರ ಜಿಲ್ಲಾಧ್ಯಕ್ಷ ಇಮ್ರಾನ್ ಎಲಿಗಾರ ತಿಳಿಸಿದ್ದಾರೆ.
ಮೂರು ದಿನಗಳ ಶಿಬಿರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ, ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಕರ್ನಾಟಕ, ಎಲೆಕ್ಟ್ರಾನಿಕ ಮತ್ತು ಮುದ್ರಣ ಮಾಧ್ಯಮ, ಕಾನೂನು ಮತ್ತು ಸಂವಿಧಾನ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು.ಈ ಮೂರು ದಿನಗಳ ಕಾಲ ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಮೊಹಮ್ಮದ ನಲಪಾಡ ನೇತೃತ್ವದಲ್ಲಿ ನಡೆಯಲಿರುವ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯಮಟ್ಟದ ಮುಖಂಡರು, ಸಚಿವರು, ಶಾಸಕರು, ಪಕ್ಷದ ವಿವಿಧ ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಸಲಹೆ, ಸೂಚನೆ, ಮಾರ್ಗದರ್ಶನ ಮಾಡಲಿದ್ದಾರೆ.
ಶಿಬಿರದಂಗವಾಗಿ ನಗರದಲ್ಲಿ ಕಾಂಗ್ರೆಸ್ ಬಾವುಟಗಳು ರಾರಾಜಿಸುತ್ತಿವೆ. ದೊಡ್ಡ ಬ್ಯಾನರ್‌ಗಳನ್ನು ನಗರದ ವಿವಿಧ ಸರ್ಕಲ್‌ಗಳಲ್ಲಿ ಕಟ್ಟಲಾಗಿದೆ. ಜು. 12ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.