ಸ್ವಾತಂತ್ರ್ಯ ಚಳವಳಿ ಹತ್ತಿಕ್ಕಿದ್ದು ಆರ್‌.ಎಸ್‌.ಎಸ್‌

| Published : Jul 19 2025, 01:00 AM IST

ಸಾರಾಂಶ

ಕಾಂಗ್ರೆಸ್ ಬಹಳ ಹಳೆಯ ರಾಜಕೀಯ ಪಕ್ಷ. ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು.

ಕನ್ನಡಪ್ರಭ ವಾರ್ತೆ ಮೈಸೂರುಬ್ರಿಟಿಷರ ಜತೆ ಕೈ ಜೋಡಿಸಿಕೊಂಡು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಆರ್‌.ಎಸ್‌.ಎಸ್‌ ಯತ್ನಿಸಿತು ಎಂಬುದು ಇತಿಹಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ನಗರದ ಕಾಂಗ್ರೆಸ್‌ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಯುವ ಕಾಂಗ್ರೆಸ್‌ ನೂತನ ಅಧ್ಯಕ್ಷ ಸೈಯದ್‌ ಅಬ್ರಾರ್‌ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾಂಗ್ರೆಸ್ ಬಹಳ ಹಳೆಯ ರಾಜಕೀಯ ಪಕ್ಷ. ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ನಾವಿಂದು ಸ್ವತಂತ್ರ್ಯರಾಗಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಆದರೆ ಆರ್‌.ಎಸ್‌.ಎಸ್‌ಅಥವಾ ಬಿಜೆಪಿಯವರು ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಬದಲಿಗೆ ಬ್ರಿಟೀಷರ ಜತೆ ಶಾಮೀಲಾಗಿದ್ದರು. ಆ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದರು ಎಂಬುದು ಈಗ ಇತಿಹಾಸ ಎಂದು ಅವರು ಹೇಳಿದರು.ಆರ್‌.ಎಸ್‌.ಎಸ್‌.ನ ಹೆಗ್ಡೆವಾರ್‌ ಅಥವಾ ಗುರೂಜಿ ಅವರು ಕೂಡ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 1950ರಲ್ಲಿ ಜನಸಂಘ ಆರಂಭವಾಯಿತು. 1980ರ ವೇಳೆಗೆ ಬಿಜೆಪಿಯಾಗಿ ಮಾರ್ಪಾಡಾಯಿತು. ಈಗ ಅವರು ನಮ್ಮ ದೇಶ, ದೇಶ ಭಕ್ತಿ, ಸ್ವಾತಂತ್ರ್ಯದ ಬಗ್ಗೆ ಬಹಳ ಮಾತನಾಡುತ್ತಾರೆ. ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ಹೋರಾಟದಲ್ಲಿ ಪಾಲ್ಗೊಳ್ಳದವರಿಗೆ ಏನು ಹಕ್ಕಿದೆ? ಆರ್‌.ಎಸ್‌.ಎಸ್‌, ಭಜರಂಗ ದಳ ಮೊದಲಾದವರು ಸಮಾಜವನ್ನು ಒಟ್ಟಿಗೆ ಕರೆದೊಯ್ಯುವ ಕೆಲಸವನ್ನು ಮಾಡುವುದಿಲ್ಲ ಎಂದು ಅವರು ಕಿಡಿಕಾರಿದರು.ಈಗ ಅಂಬೇಡ್ಕರ್‌ ಅವರ ಮೇಲೆ ಒಲುವು ಬಂದಂತೆ ಮಾತನಾಡುತ್ತಾರೆ. ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌, ಅವರ ಅಂತ್ಯಕ್ರಿಯೆಗೂ ಜಾಗ ಕೊಡಲಿಲ್ಲ ಎಂದೆಲ್ಲ ಹೇಳುತ್ತಾರೆ. ಆದರೆ ಅವರನ್ನು ಸೋಲಿಸಿದ್ದು ಯಾರು ಎಂಬ ಬಗ್ಗೆ ಅಂಬೇಡ್ಕರ್‌ ಅವರೇ ತಮ್ಮ ಗೆಳೆಯರೊಂದಿಗೆ ಪತ್ರದ ಮೂಲಕ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಆರ್‌.ಎಸ್‌.ಎಸ್‌ ನ ಸಾವರ್ಕರ್‌ ಮತ್ತು ಕಮ್ಯುನಿಸ್ಟ್‌ ನ ರಂಗ ಅವರು ಸೋಲಿಸಿರುವುದಾಗಿ ಅಂಬೇಡ್ಕರ್‌ ಹೇಳಿದ್ದಾರೆ ಎಂದರು.ಸಬ್ ಕಾ ಸಾತ್, ಸಬ್‌ಕಾ ವಿಕಾಸ್‌ ಎನ್ನುತ್ತಾರೆ, ಆದರೆ ಅವರ ನಡವಳಿಕೆಯಲ್ಲಾಗಲಿ, ಉದ್ದೇಶದಲ್ಲಾಗಲಿ ಅದಿಲ್ಲ. ಕಳೆದ ಸಂಸತ್‌ಚುನಾವಣೆಯಲ್ಲಿ ಆಯ್ಕೆಯಾದ 543 ಮಂದಿ ಸದಸ್ಯರಲ್ಲಿ 240 ಮಂದಿ ಬಿಜೆಪಿಯವರು ಇದ್ದಾರೆ. ಈ ಪೈಕಿ ಒಬ್ಬರೂ ಮುಸಲ್ಮಾನ ಸಂಸದ ಇಲ್ಲ. ಅಂದ ಮೇಲೆ ಹೇಗೆ ಸಬ್‌ಕಾ ಸಾತ್‌ ಆಗುತ್ತದೆ ಎಂದು ಅವರು ಪ್ರಶ್ನಿಸಿದರು.ಸಂವಿಧಾನಕ್ಕೆ ಗೌರವವನ್ನೂ ಕೊಡುವುದಿಲ್ಲ, ರಕ್ಷಣೆಯನ್ನೂ ಮಾಡುವುದಿಲ್ಲ. ಆದರೆ ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವುದು ಕಾಂಗ್ರೆಸ್‌ ಮಾತ್ರ. ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವದ ರಕ್ಷಣೆ, ಸಾಮಾಜಿಕ ನ್ಯಾಯದ ರಕ್ಷಣೆ ಮತ್ತು ಜಾತ್ಯಾತೀತತೆಯ ರಕ್ಷಣೆ ಮಾಡುವುದು ಕಾಂಗ್ರೆಸ್‌ ಮಾತ್ರ ಎಂದರು.ಜಾತ್ಯಾತೀತತೆ ಮತ್ತು ಸಮಾಜವಾದ ಅವರಿಗೆ ಗೊತ್ತಿಲ್ಲ. ಆದ್ದರಿಂದಲೇ ಸಂವಿಧಾನದಿಂದ ಆ ಎರಡೂ ಪದಗಳನ್ನು ತೆಗೆಯಬೇಕು ಎಂದು ಹೊಸಬಾಳೆ ಹೇಳಿದ್ದಾರೆ. ಅವರ ಸಿದ್ಧಾಂತ ಎಷ್ಟೇ ಅದುಮಿಟ್ಟರೂ ಅದು ಆಚೆ ಬರುತ್ತದೆ ಎಂಬುದಕ್ಕೆ ಇದೇ ಉದಾಹರಣೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಜಾತಿ ಜಾತಿಯ ಮಧ್ಯೆ, ಧರ್ಮ ಧರ್ಮದ ಮಧ್ಯೆ ಸಂಘರ್ಷ ಇರಬೇಕು ಎಂಬುದು ಅವರ ಉದ್ದೇಶ ಎಂದು ಅವರು ಕಟುವಾಗಿ ಟೀಕಿಸಿದರು.ನಾವು ಪ್ರಜಾಪ್ರಭುತ್ವ, ಸಂವಿಧಾನ, ಸಮಾಜಿಕ ನ್ಯಾಯ ಒಪ್ಪಿಕೊಂಡಿದ್ದೇವೆ. ಆದ್ದರಿಂದ ನಾವು ನಂಬಿದ ಸಿದ್ಧಾಂತದಲ್ಲಿ ರಾಜಿ ಆಗಬಾರದು ಎಂದು ಅವರು ಸಲಹೆ ನೀಡಿದರು.ಬಿಜೆಪಿ, ಜೆಡಿಎಸ್ ಗೆ ಸಿದ್ಧಾಂತ ಇಲ್ಲ. ಜನರ ಸಂಪೂರ್ಣ ಬಹುಮತ ಇರಲಿಲ್ಲ. ಬಹುಮತ ಬಂದಿರಲಿಲ್ಲ. ಆದರೂ ಸಿಎಂ ಅಗಿದ್ದು ಆಪರೇಷನ್ ಕಮಲದಿಂದ, ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದ ಪಡೆದು ಬಂದಿಲ್ಲ. ಅವರನ್ನು ಜನರು ತಿರಸ್ಕರಿಸಿದ್ದಾರೆ ಎಂದು ಟೀಕಿಸಿದರು.ಶಾಸಕ ತನ್ವೀರ್‌ ಸೇಠ್‌ ಮಾತನಾಡಿ, ಸರ್ಕಾರದ ಖಜಾನೆ ಖಾಲಿ ಎಂಬ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಮುಖ್ಯಮಂತ್ರಿಗಳು ವಿವಿಧ ಕಾಮಗಾರಿಗೆ ಚಾಲನೆ ನೀಡಿ ಉತ್ತರ ಕೊಡುತ್ತಿದ್ದಾರೆ. ಇಂದಿನ ಯುವಕರು ಶಿಸ್ತು ಕಳೆದುಕೊಂಡಿದ್ದಾರೆ. ಯುವ ಕಾಂಗ್ರೆಸ್‌ ಸಮಿತಿಗೆ ಚುನಾವಣೆ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಚುನಾವಣೆ ಬಳಿಕವೂ ವಿದ್ಯಾರ್ಥಿಗಳ ಗುಂಪುಗಳಲ್ಲಿನ ಒಡಕು ಹಾಗೆಯೇ ಮುಂದುವರೆಯುತ್ತದೆ ಎಂದರು.ನೀವು ಪರಸ್ಪರ ವಿಶವಾಸದಿಂದ ಇರಬೇಕು. ಸೋಲು ಗೆಲುವು ಸಹಜ ಅದನ್ನು ಬದಿಗಿಡಬೇಕು. ರಾಜ್ಯ ಘಟಕದ ಪದಾಧಿಕಾರಿಗಳು ಆಗಾಗ್ಗ ಭೇಟಿ ನೀಡಿ ಇಂತಹ ಗುಂಪುಗಳನ್ನು ಒಂದುಗೂಡಿಸಬೇಕು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕ ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಡಿ. ರವಿಶಂಕರ್‌, ನಗರ ಕಾಂಗ್ರೆಸ್‌ಅಧ್ಯಕ್ಷ ಆರ್. ಮೂರ್ತಿ, ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್ ಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಡಾ.ಬಿ.ಜೆ. ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕಾರ್ಯದರ್ಶಿ ಜ್ಯೋತಿ ಶಯರ್ ಕಾರ್ಯದರ್ಶಿ ರಾಷ್ಟ್ರೀಯ ಯುವ ಕಾಂಗ್ರೆಸ್, ಡಾ.ಡಿ. ತಿಮ್ಮಯ್ಯ, ಕೆ.ಮರಿಗೌಡ, ನಂಜುಂಡಸ್ವಾಮಿ, ಕೆ. ರವಿಶಂಕರ್ ಮೊದಲಾದವರು ಇದ್ದರು.---ಕೋಟ್ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮತ್ತು ಆರ್‌.ಎಸ್‌.ಎಸ್‌ ನವರು ಕಾಂಗ್ರೆಸ್‌ ವಿರುದ್ಧ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಬೇಕು. ರಾಜ್ಯದಲ್ಲಿನ ಅಭಿವೃದ್ಧಿಯನ್ನು ನೋಡಿ ಸಹಿಸಲಾಗದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಂವಿಧಾನದ ಆಶಯವನ್ನು ತೆಗೆದು ಹಾಕುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ.- ಮಂಜುನಾಥ್‌ ಗೌಡ, ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ