ಹಾವೇರಿ: ನೀಟ್ ಪರೀಕ್ಷೆ ರದ್ದು ಖಂಡಿಸಿ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಒತ್ತಾಯಿಸಿ ಜಿಲ್ಲಾ ಯುಥ್ ಕಾಂಗ್ರೆಸ್ ವತಿಯಿಂದ ಗುರುವಾರ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಂಸದರ ಕಚೇರಿ ಎದುರು ಪ್ರತಿಭಟಿಸಲಾಯಿತು.
ಯುಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನ್‌ಕುಮಾರ ಲಮಾಣಿ ಮಾರ್ಗದರ್ಶನದಲ್ಲಿ ನಡೆದ ಪ್ರತಿಭಟನೆ ವೇಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕಪ್ರಾಯವಾಗಿದ್ದು, ಕೇಂದ್ರ ಬಿಜೆಪಿ ಸರ್ಕಾರ ಹಗರಣಗಳ ಸರಮಾಲೆಯಲ್ಲಿ ಮುಳುಗಿದೆ. ಈಗ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಪ್ರತಿ ಒಬ್ಬ ವಿದ್ಯಾರ್ಥಿಯಿಂದ ₹30 ಲಕ್ಷ ಹಣ ಪಡೆದು ಪ್ರಶ್ನೆಗಳನ್ನು ಸೋರಿಕೆ ಮಾಡಲಾಗಿದೆ. ಈ ಕುರಿತು ತನಿಖೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅವರನ್ನು ನೇಮಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಯುಥ್ ಕಾಂಗ್ರೆಸ್ ಮುಖಂಡ ಶಂಕರ ಮೆಹರವಾಡೆ ಮಾತನಾಡಿ, ಕೇಂದ್ರ ಸರ್ಕಾರ ವೈದ್ಯಕೀಯ ವಿದ್ಯಾರ್ಥಿಗಳ ಜೀವನ ಜತೆ ಆಟವಾಡಿದೆ. ಇದನ್ನು ಯುಥ್ ಕಾಂಗ್ರೆಸ್ ಸಹಿಸಲ್ಲ. ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವವರೆಗೂ ಹೋರಾಟ ನಿಲ್ಲಿಸಲ್ಲ. ವಿದ್ಯಾರ್ಥಿಗಳ ಪರವಾಗಿ ಕಾಂಗ್ರೆಸ್ ಇದೆ. ಪ್ರಶ್ನೆಪತ್ರಿಕೆ ಸೋರಿಕೆ ಹಿಂದೆ ಯಾರದೇ ಕೈವಾಡ ಇರಲಿ, ತಕ್ಕ ಶಿಕ್ಷೆ ಆಗಬೇಕು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಹಿರೇಕೆರೂರ ತಾಲೂಕು ಯುಥ್ ಕಾಂಗ್ರೆಸ್ ಅಧ್ಯಕ್ಷ ಗುಲಾಮ್ ರಜಾ ಬೊಗಳಿ, ಹಾವೇರಿ ಗ್ರಾಮೀಣ ಯುಥ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಲಮಾಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮಕರವಳ್ಳಿ, ಜಮೀರ್ ಜಿಗರಿ, ಶಿಗ್ಗಾಂವಿಯ ಯುವ ಮುಖಂಡ ಸುಧೀರ ಲಮಾಣಿ, ನಾಗರಾಜ ಬಡೆಮ್ಮನವರ, ಮಂಜುನಾಥ ಲಕ್ಮಾಪುರ, ವಿನಯ ಪಾಲನಕರ್, ಹಸನ ಮುಲ್ಲಾ, ಖಾದರ್‌ಸಾಬ ಗಡ್ಡದ, ಯಲ್ಲಪ್ಪ ಶಿಗ್ಗಾವಿ ಇದ್ದರು.