ಹೊಸಪೇಟೆ: ಕೇಂದ್ರ ಸರ್ಕಾರದ ತೈಲ ಖರೀದಿ ನೀತಿ ಹಾಗೂ ವಿದೇಶಾಂಗ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಭರತಕುಮಾರ್ ಸಿ.ಆರ್. ಮಾತನಾಡಿ, ದೇಶದಲ್ಲಿ ಪ್ರಧಾನಮಂತ್ರಿ ಕಾಂಪ್ರಮೈಸ್ ಆಗುವುದರ ಮೂಲಕ ದೇಶವನ್ನು ದಿವಾಳಿತನಕ್ಕೆ ದೂಡಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಯುವಕರ, ರೈತರ, ಬಡವರ ವಿರೋಧಿ ಸರ್ಕಾರವಾಗಿದೆ. ರೈತರು ಪ್ರತಿದಿನ ಬಳಸುವಂತಹ ದಿನಸಿನ ಮೇಲೆ, ತೈಲದ ಮೇಲೆ ದುಬಾರಿ ಬೆಲೆಯನ್ನು ಏರಿ ಜನರಿಗೆ ಮೋಸ ಮಾಡುವಂಥ ಕೆಲಸವನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಅಮೆರಿಕ, ಇಸ್ರೇಲ್, ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ತೈಲ ಖರೀದಿ ವಿಚಾರದಲ್ಲಿ ಭಾರತವು ಸ್ವತಂತ್ರ ನಿರ್ಧಾರ ಕೈಗೊಳ್ಳಬೇಕಾದರೆ ಕೇಂದ್ರ ಸರ್ಕಾರ ಅಮೆರಿಕದ ಸೂಚನೆಯಂತೆ ನಡೆದುಕೊಳ್ಳುತ್ತಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಅವರು ಆರೋಪಿಸಿದರು.ಭಾರತದ ಪ್ರಧಾನಿ ಬೇರೆ ದೇಶಗಳ ಒತ್ತಡಕ್ಕೆ ಮಣಿಯಬಾರದು. ರಾಷ್ಟ್ರದ ಸ್ವಾಭಿಮಾನ, ಆರ್ಥಿಕ ಸ್ವಾವಲಂಬನೆ ಮತ್ತು ವಿದೇಶಾಂಗ ಸ್ವತಂತ್ರತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ನಗರದ ವಿಜಯನಗರ ಕಾಲೇಜು ಮುಂಭಾಗದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ 100 ಅಡಿ ಉದ್ದ, 40 ಅಡಿ ಅಗಲದ ಬೃಹತ್ ಗಾತ್ರದ ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಕಾರ್ಯದರ್ಶಿ ಅಬ್ಬು ತಾಹಿರ್, ರಾಜ್ಯ ಸಾಮಾಜಿಕ ಜಾಲತಾಣದ ಸಂಯೋಜಕ ಗಣೇಶ್ ಪಾಟೀಲ್, ಜಿಲ್ಲಾ ಉಪ್ಪಾಧ್ಯಕ್ಷ ಜೀಶನ್ ಹ್ಯಾರಿಸ್, ಲೀಗಲ್ ಸೆಲ್ ಅಧ್ಯಕ್ಷ ಅಬ್ದುಲ್ ಕಲಾಂ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಯಾರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಆಯೇಷಾ, ಮುಖಂಡರಾದ ಹಾರೋನ್, ಪ್ರದೀಪ್, ಗೌಸ್, ಪ್ರೇಮ್ ಕುಮಾರ್, ಶರತ್, ಕೊಟ್ರೇಶ್, ಸುಹಾಯಿಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.