ರಾಹುಲ್‌ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನ ಖಂಡಿಸಿ ಯುವ ಕಾಂಗ್ರೆಸ್‌ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮತದಾರರ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸುತ್ತಿದ್ದ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನ ಖಂಡಿಸಿ ಯುವ ಕಾಂಗ್ರೆಸ್‌ನಿಂದ ಬುಧವಾರ ಸಂಜೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪಂಜಿನ ಮೆರವಣಿಗೆ ಮೂಲಕ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ಮತದಾರರ ಹಕ್ಕುಗಳ ರಕ್ಷಣೆಗಾಗಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಲು ಯತ್ನಿಸಿದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಂಧನವನ್ನು ಖಂಡಿಸಿದ ಕಾರ್ಯಕರ್ತರು, ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಿ, ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಯವರ ಮುಖವಾಡ ಧರಿಸಿ,‌ ‘ನಾನು ರಾಹುಲ್ ಗಾಂಧಿ’ ಎಂಬ ಫಲಕವನ್ನು ಕುತ್ತಿಗೆಗೆ ನೇತು ಹಾಕಿಕೊಂಡು, ಪಂಜನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಯತ್ನಿಸಿದರು. ಈ ವೇಳೆ ಪೊಲೀಸರು ನೂರಾರು ಪ್ರತಿಭಟನಾಕಾರರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಬಂಧನಕ್ಕೆ ಹೆದರುವುದಿಲ್ಲ:

ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್‌ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಮಾತನಾಡಿ, ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವಕ್ಕಾಗಿ ಜೈಲಿಗೆ ಹೋದ ಇತಿಹಾಸ ಕಾಂಗ್ರೆಸ್ ಪಕ್ಷದ್ದಾಗಿದೆ. ಬಂಧನಕ್ಕೆ ಹೆದರುವ ಜಾಯಮಾನ ನಮ್ಮದಲ್ಲ. ರಾಹುಲ್ ಗಾಂಧಿಯವರ ಧ್ವನಿಯನ್ನು ಬಂಧನದ ಮೂಲಕ ಅಡಗಿಸಲು ಆಗುವುದಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿನ ಅನುಮಾನ, ಆತಂಕಗಳಿಗೆ ಪಾರದರ್ಶಕ ತನಿಖೆಯ ಮೂಲಕ ಉತ್ತರ ನೀಡಬೇಕೇ ಹೊರತು, ಪ್ರಶ್ನೆ ಕೇಳುವವರನ್ನು ಬಂಧಿಸುವ ಹೇಡಿತನ ತೋರಬಾರದು ಎಂದು ಕಿಡಿಕಾರಿದರು.

ಮತದಾನ ಕೇವಲ ಹಕ್ಕಲ್ಲ: ಅದು ಪ್ರಜಾಪ್ರಭುತ್ವದ ಅಸ್ತಿತ್ವದ ಆಧಾರವಾಗಿದೆ. ರಾಹುಲ್ ಗಾಂಧಿಯವರನ್ನು ಬಂಧಿಸಬಹುದು, ನನ್ನನ್ನು ಬಂಧಿಸಬಹುದು, ಇಂದು ರಾಹುಲ್ ಗಾಂಧಿಯವರನ್ನು ಪ್ರತಿನಿಧಿಸುತ್ತಿರುವ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನೂ ಬಂಧಿಸಬಹುದು. ಆದರೆ, ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಇಡೀ ದೇಶವೇ‌ ಬೀದಿಗಿಳಿದು ಹೋರಾಟ ಮಾಡುವ ಕಾಲ ದೂರವಿಲ್ಲ. ಎಲ್ಲರನ್ನೂ ನಿಮ್ಮಿಂದ ಬಂಧಿಸಲು ಸಾಧ್ಯವೇ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಕೆಪಿವೈಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಶ್ರೀಧರ್ ಜಾಧವ್, ರಾಜ್ಯ ಉಪಾಧ್ಯಕ್ಷ ಸಮೃದ್ಧ್ ಹೆಗಡೆ, ಬೆಂಗಳೂರು ಕೇಂದ್ರ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್, ಉತ್ತರ ಜಿಲ್ಲಾಧ್ಯಕ್ಷ ರಾಹುಲ್ ಗೌಡ, ಪಶ್ಚಿಮ ಜಿಲ್ಲಾಧ್ಯಕ್ಷ ಪ್ರವೀಣ್, ಪೂರ್ವ ಜಿಲ್ಲಾಧ್ಯಕ್ಷ ರಾಮ್ ನಾಯಕ್ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.