ಸಾರಾಂಶ
ಕಾರು ಮತ್ತು ಖಾಸಗಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಸಾಯಿ ಸಾಗರ ಹೋಟೆಲ್ ಹತ್ತಿರ ಸೊಲ್ಲಾಪುರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹುನಗುಂದಕಾರು ಮತ್ತು ಖಾಸಗಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಯುವಕ ಸ್ಥಳದಲ್ಲಿಯೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಹೊರವಲಯದ ಸಾಯಿ ಸಾಗರ ಹೋಟೆಲ್ ಹತ್ತಿರ ಸೊಲ್ಲಾಪುರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಗುರುವಾರ ರಾತ್ರಿ ನಡೆದಿದೆ.
ಕೊಪ್ಪಳ ಜಿಲ್ಲೆ ಇಂದಿರಾ ನಗರದ ಪುಟ್ಟಹನಮಂತಪ್ಪ ಕಾರಬಾರಿ (26) ಮೃತ ಯುವಕ. ಕಾರು ಚಾಲಕ ಸೇರಿ ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಸ್ತೆ ತಡೆದು ಕರವೇ ಪ್ರತಿಭಟನೆ:
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆದು 2 ಗಂಟೆಯಾದರೂ ಸ್ಥಳಕ್ಕೆ ಸಂಬಂಧಿಸಿ ಅಧಿಕಾರಿಗಳು ಆಗಮಿಸದ್ದರಿಂದ ಆಕ್ರೋಶಗೊಂಡ ಕರವೇ ಅಧ್ಯಕ್ಷ ಶರಣು ಗಾಣಿಗೇರ ಹಾಗೂ ಇತರರು ರಸ್ತೆಯಲ್ಲೇ ಶವ ಇಟ್ಟು ಸುಮಾರು 2 ಗಂಟೆಗಳ ಕಾಲ ಹೆದ್ದಾರಿ ತಡೆದು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.ಕರವೇ ನಗರ ಘಟಕ ಅಧ್ಯಕ್ಷ ಹುಸೇನಸಾಬ ಸಂದಿಮನಿ ಮಾತನಾಡಿ, ಪಟ್ಟಣದ ರಾಮವಾಡಗಿ ಕ್ರಾಸ್‌ನಿಂದ ಸಾಯಿಸಾಗರ ಹೋಟೆಲ್‌ವರೆಗೆ ರಾತ್ರಿ ರಸ್ತೆಯಲ್ಲಿ ಸರಿಯಾದ ಸಿಗ್ನಲ್ ಲೈಟ್ ಇಲ್ಲದೇ ಪದೇ ಪದೆ ಅಪಘಾತ ನಡೆಯುತ್ತಿವೆ. ಮೇಲ್ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಬಾರಿ ಸರ್ಕಾರ ಮತ್ತು ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆದು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕರವೇ ತಮ್ಮಣ್ಣ ಸೂಡಿ, ಬಾಬು ವಾಲೀಕಾರ, ಕತೀಬ್ ಮುಲ್ಲಾ, ರಿಯಾಜ್ ಮುಲ್ಲಾ, ಮಹಾಂತೇಶ ತಾರಿವಾಳ, ನಬೀದಅಹ್ಮದ ಸಂದಿಮನಿ, ಮಹ್ಮದ್‌ಬಿಲಾಲ್ ಮಾಸಾಪತಿ, ಸೈಯದ್ ನಧಾಪ್ ಸೇರಿದಂತೆ ಇತರರು ಇದ್ದರು.