ಸಾರಾಂಶ
ಯುವಜನರಲ್ಲಿರುವ ಕಲಾಪ್ರತಿಭೆಯನ್ನು ಹೊರತರಲು ಯುವಜನೋತ್ಸವ ಸಹಕಾರಿಯಾಗಿದೆ ಎಂದು ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಅವರು ತಿಳಿಸಿದರು. ಚಾಮರಾಜನಗರದಲ್ಲಿ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯುವಜನರಲ್ಲಿರುವ ಕಲಾಪ್ರತಿಭೆಯನ್ನು ಹೊರತರಲು ಯುವಜನೋತ್ಸವ ಸಹಕಾರಿಯಾಗಿದೆ ಎಂದು ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಅವರು ತಿಳಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರಲ್ಲಿ ನಾನಾ ಬಗೆಯ ಕಲಾಪ್ರಕಾರಗಳಿವೆ. ಅವುಗಳನ್ನು ಹೊರಜಗತ್ತಿಗೆ ಪರಿಚಯಿಸುವ ಮೂಲಕ ಯುವಜನತೆಯನ್ನು ಪ್ರೋತ್ಸಾಹಿಸಲು ಸರ್ಕಾರವು ನಿರಂತರವಾಗಿ ಪ್ರತಿವರ್ಷ ಯುವಜನಮೇಳಗಳನ್ನು ಆಯೋಜಿಸುತ್ತಿದೆ. ಜಿಲ್ಲೆ, ರಾಜ್ಯಮಟ್ಟದಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿ ತರಬೇಕು. ಹಾಗೆಯೇ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಸಂಕಷ್ಟದಲ್ಲಿರುವ ಯುವಜನರಿಗೆ ಸರ್ಕಾರ ಅಗತ್ಯ ನೆರವು ನೀಡಬೇಕಾಗಿದೆ ಎಂದು ತಿಳಿಸಿದರು.ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯ ಶ್ರೀನಿವಾಸಪ್ರಸಾದ್ ಮಾತನಾಡಿ, ವಿವಿಧ ಸ್ಪರ್ಧೆಗಳ ಮೂಲಕ ಜಿಲ್ಲೆಯ ಯುವಕ, ಯುವತಿಯರನ್ನು ಮುಖ್ಯವಾಹಿನಿಗೆ ತರಲು ಯುವಜನೋತ್ಸವ ಆಯೋಜಿಸಿ ಜಿಲ್ಲಾಡಳಿತ ಉತ್ತಮ ಪ್ರಯತ್ನ ಮಾಡುತ್ತಿದೆ. ಯುವಜನತೆ ಸತತ ಪರಿಶ್ರಮದ ಮೂಲಕ ತಮ್ಮಲ್ಲಿರುವ ಕಲಾಪ್ರತಿಭೆ ಅನಾವರಣಗೊಳಿಸಲು ಮುಂದಾಗಬೇಕು ಎಂದರು. ಕರ್ನಾಟಕ ಜಾನಪದ ಅಕಾಡಮಿ ಸದಸ್ಯ ದೇವಾನಂದ್ ವರಪ್ರಸಾದ್ ಮಾತನಾಡಿ, ಆಧುನೀಕತೆ, ಜಾಗತೀಕರಣದಿಂದ ಈ ನೆಲದ ಜನಪದ ಸಂಸ್ಕೃತಿ ಮರೆಯಾಗುತ್ತಿದೆ. ಯುವಕರು ತಮ್ಮನ್ನು ತಾವು ಅರಿಯಲು ಯುವಜನೋತ್ಸವ ವೇದಿಕೆಯಾಗಲಿದೆ. ಶಿಸ್ತು, ಸಂಯಮ, ಕ್ರೀಯಾಶೀಲ ಚಿಂತನೆ, ವ್ಯಕ್ತಿತ್ವ ವಿಕಸನಕ್ಕೆ ಯುವಜನೋತ್ಸವ ನೆರವಾಗಲಿದೆ. ಯುವಕರು ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು. ಸಾಹಿತಿ, ಚಿಂತಕ ಮಹದೇವ ಶಂಕನಪುರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಬರೀ ಓದುವುದಷ್ಟೆ ಅಲ್ಲ. ಸಾಹಿತ್ಯ, ಕವಿತೆ ರಚನೆ, ಹಾಡು ಬರೆಯುವುದು, ನಾಟಕಗಳಲ್ಲಿ ಅಭಿನಯಿಸುವಂತಹ ಉತ್ತಮ ಹವ್ಯಾಸ ರೂಢಿಸಿಕೊಳ್ಳುವುದು ಅನಿವಾರ್‍ಯವಾಗಿದೆ. ಕನ್ನಡದ ವರನಟ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಈ ನೆಲದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಅವರ ಮಾದರಿಯಲ್ಲಿಯೇ ಇಂದಿನ ಯುವಜನತೆ ಮುನ್ನೆಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಹರು ಯುವ ಕೇಂದ್ರದ ನಿವೃತ್ತ ಪ್ರಾದೇಶಿಕ ಜಂಟಿ ನಿರ್ದೇಶಕ ಎಂ.ಎನ್. ನಟರಾಜು ಮಾತನಾಡಿ, ಚಾಮರಾಜನಗರ ಜಿಲ್ಲೆ ಯುವ ಪ್ರತಿಭೆಗಳ ಕಣಜವಾಗಿದೆ. ಯುವಜನ ಮೇಳದಿಂದ ಸಾಕಷ್ಟು ಕಲಾವಿದರು ಉದ್ಭವಿಸಲಿದ್ದಾರೆ. ಕಲಾಪ್ರತಿಭೆಗಳಿಗೆ ಯುವಜನೋತ್ಸವ ವೇದಿಕೆಯಾಗಿದೆ. ಯುವಕರು ಈ ದೇಶದ ಶಕ್ತಿ ಆಗಿರುವುದರಿಂದ ಪ್ರತಿವರ್ಷ ಯುವಜನೋತ್ಸವ ನಡೆಯುತ್ತಿದೆ. ದೇಶ ಕಟ್ಟುವಲ್ಲಿ ಇದು ಉತ್ತಮ ಬೆಳವಣಿಗೆಯಾಗಿದೆ. ಯುವಪ್ರತಿಭೆಗಳನ್ನು ಗುರುತಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆಧುನೀಕತೆಯ ಸೊಗಡಿನಲ್ಲಿ ನಶಿಸುತ್ತಿರುವ ಗ್ರಾಮೀಣ ಜನಪದ ಸ್ಪರ್ಧೆಗಳನ್ನು ಪುನಶ್ಚೇತನಗೊಳಿಸಲು ಯುವಜನೋತ್ಸವ ನೆರವಾಗಬೇಕು ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಕಾಳಿಂಗಸ್ವಾಮಿ, ಚಾಮರಾಜನಗರ ವಿ.ವಿ. ಜಾನಪದ ಉಪನ್ಯಾಸಕ ಶಿವರಾಜು, ಜೆಎಸ್ಎಸ್ ಬಿ.ಇಡಿ ಕಾಲೇಜಿನ ಉಪನ್ಯಾಸಕ ನಟೇಶ್, ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಸುರೇಶ್‌ನಾಗ್, ಸೋಮಹಳ್ಳಿ ನಾಗರಾಜು, ಚಿತ್ರಕಲಾವಿದ ಮಧು, ಕಥೆಗಾರ್ತಿ ಶೀಲಾ ಸತ್ಯೇಂದ್ರಸ್ವಾಮಿ ಇತರರು ಉಪಸ್ಥಿತರಿದ್ದರು.