ಇಂದು ತ್ವರಿತ ಬದಲಾವಣೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಜಾಗತಿಕ ಸ್ಪರ್ಧೆಯ ಯುಗ. ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಜೈವಿಕ ತಂತ್ರಜ್ಞಾನ, ಹಸಿರು ಶಕ್ತಿ, ಸೈಬರ್ ಭದ್ರತೆ ಮತ್ತು ಡಿಜಿಟಲ್ ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ನಿರಂತರವಾಗಿ ಹೊರಹೊಮ್ಮುತ್ತಿವೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಹೇಳಿದರು.

ಧಾರವಾಡ

ಪ್ರಸ್ತುತ ಭಾರತವು ವಿಶ್ವದಲ್ಲಿ ಉದಯೋನ್ಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇಲ್ಲಿಯ ಯುವಜನರೇ ನಮ್ಮ ದೊಡ್ಡ ಶಕ್ತಿಯಾಗಿದ್ದು, ಈ ರಾಷ್ಟ್ರದ ಭವಿಷ್ಯದ ಶಿಲ್ಪಿಗಳಾಗಿದ್ದಾರೆ. ಯುವಜನತೆ ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ತ್ವರಿತ ಬದಲಾವಣೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಜಾಗತಿಕ ಸ್ಪರ್ಧೆಯ ಯುಗ. ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಜೈವಿಕ ತಂತ್ರಜ್ಞಾನ, ಹಸಿರು ಶಕ್ತಿ, ಸೈಬರ್ ಭದ್ರತೆ ಮತ್ತು ಡಿಜಿಟಲ್ ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ನಿರಂತರವಾಗಿ ಹೊರಹೊಮ್ಮುತ್ತಿವೆ. ನಿರಂತರವಾಗಿ ಬದಲಾಗುತ್ತಿರುವ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ, ನಿರಂತರ ಕಲಿಕೆಯ ಮನೋಭಾವ, ನವೀನ ಮನಸ್ಥಿತಿ ಮತ್ತು ಸಮಾಜದ ಜವಾಬ್ದಾರಿಯ ಪ್ರಜ್ಞೆ ಅತ್ಯಗತ್ಯ. ಆದ್ದರಿಂದ, ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲ್ಯ ನವೀಕರಿಸುವುದು ಮತ್ತು ಕಾಲದ ಅಗತ್ಯ ಪೂರೈಸಲು ನಿಮ್ಮನ್ನು ವಿಕಸಿಸಿಕೊಳ್ಳುವುದು ಅತ್ಯಗತ್ಯ ಎಂದರು.

ಪರಿಸರ ಸಂರಕ್ಷಣೆ ಇಂದಿನ ಪ್ರಮುಖ ವಿಷಯ. ಹವಾಮಾನ ಬದಲಾವಣೆ, ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮುಂತಾದ ಸಮಸ್ಯೆಗಳು ಗಮನಾರ್ಹ ಸವಾಲುಗಳನ್ನು ಒಡ್ಡುತ್ತವೆ. ಪ್ರತಿಯೊಬ್ಬರೂ ಪರಿಸರ ಪ್ರಜ್ಞೆ ಹೊಂದಬೇಕು ಮತ್ತು ಸುಸ್ಥಿರ ಅಭಿವೃದ್ಧಿಯ ತತ್ವ ಅಳವಡಿಸಿಕೊಳ್ಳಬೇಕು ಎಂದ ಅವರು, ಕವಿವಿ ಶಿಕ್ಷಣದ ಕೇಂದ್ರ ಮಾತ್ರವಲ್ಲದೆ ಸಾಮಾಜಿಕ ಪ್ರಜ್ಞೆ, ಸಂವೇದನೆ ಮತ್ತು ಬದಲಾವಣೆಯ ಜೀವಂತ ಸಂಕೇತ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಪದ್ಮಶ್ರೀ ಡಾ. ಎ.ಎಸ್. ಕಿರಣ್ ಕುಮಾರ್, ಪ್ರೊ. ಎ.ಎಂ. ಖಾನ್ ಇದ್ದರು.