ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮತ್ತು ಧರ್ಮ ವಿಮುಖತೆಯಿಂದ ಯುವಜನತೆ ದಾರಿ ತಪ್ಪುತ್ತಿದೆ. ಇದಕ್ಕೆ ಪರಿಹಾರವೆಂದರೆ ಬಾಲ್ಯದಿಂದಲೇ ಮಕ್ಕಳಿಗೆ ಧರ್ಮ ಶಿಕ್ಷಣ, ರಾಷ್ಟ್ರಭಕ್ತಿ ಮತ್ತು ಭಾರತೀಯ ಸಂಸ್ಕಾರಗಳನ್ನು ಬಿತ್ತುವುದು.
ಗದಗ: ಯುವಪೀಳಿಗೆಗೆ ಧರ್ಮ ಸಂಸ್ಕಾರ, ಧರ್ಮ ಶಿಕ್ಷಣ ಹಾಗೂ ಸನಾತನ ಭಾರತೀಯ ಸಂಸ್ಕೃತಿಯನ್ನು ಕಲಿಸುವುದು ಕೇವಲ ಅವಶ್ಯಕತೆಯಲ್ಲ, ಕಾಲದ ತುರ್ತು ಅವಶ್ಯಕತೆಯೂ ಆಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಪ್ರವೀಣ ಬೆನ್ನೂರ ತಿಳಿಸಿದರು.ನಗರದ ರಾಜೀವ ಗಾಂಧಿ ನಗರದ ನವಲೆ ಕಟ್ಟಡದಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ಹಾಗೂ ಭಾವಸಾರ ವಿಜನ್ ಇಂಡಿಯಾ ಆಶ್ರಯದಲ್ಲಿ ನಡೆದ ವಿಶೇಷ ಹಿಂದೂ ಜನಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ದೇಶಾದ್ಯಂತ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸುವ ಪವಿತ್ರ ಕಾರ್ಯದಲ್ಲಿ ನಿರತವಾಗಿವೆ ಎಂದರು.
ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮತ್ತು ಧರ್ಮ ವಿಮುಖತೆಯಿಂದ ಯುವಜನತೆ ದಾರಿ ತಪ್ಪುತ್ತಿದೆ. ಇದಕ್ಕೆ ಪರಿಹಾರವೆಂದರೆ ಬಾಲ್ಯದಿಂದಲೇ ಮಕ್ಕಳಿಗೆ ಧರ್ಮ ಶಿಕ್ಷಣ, ರಾಷ್ಟ್ರಭಕ್ತಿ ಮತ್ತು ಭಾರತೀಯ ಸಂಸ್ಕಾರಗಳನ್ನು ಬಿತ್ತುವುದು ಎಂದರು.ಸಮಾಜದಲ್ಲಿ ಧರ್ಮ ಸಂಸ್ಕಾರ ಬಿತ್ತುವ ಕೆಲಸವನ್ನು ಸನಾತನ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ಬಾಲ ಶಿಕ್ಷಣ, ಯುವ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಹಿಂದೂ ಧರ್ಮದ ಶಾಶ್ವತ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲಾಗುತ್ತಿದೆ. ಧರ್ಮರಕ್ಷಣೆಯೇ ರಾಷ್ಟ್ರ ರಕ್ಷಣೆ ಎಂಬ ತತ್ವದ ಮೇಲೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಸಮಾಜ ಎಚ್ಚರಗೊಳ್ಳಬೇಕು. ಇದಕ್ಕಾಗಿಯೇ ಸನಾತನ ಸಂಸ್ಥೆಯು ರಣ ರಾಗಿಣಿ ಕಾರ್ಯಕ್ರಮದ ಮೂಲಕ ಮಹಿಳೆಯರು ಮತ್ತು ಯುವತಿಯರಲ್ಲಿ ಧರ್ಮರಕ್ಷಣೆ, ಸ್ವಸಂರಕ್ಷಣೆ ಮತ್ತು ಆತ್ಮಗೌರವದ ಜಾಗೃತಿ ಮೂಡಿಸುತ್ತಿದೆ. ಪ್ರತಿಯೊಬ್ಬ ಹಿಂದೂ ತಾಯಿಯೂ ತನ್ನ ಮಗಳಿಗೆ ಧರ್ಮ ಸಂಸ್ಕಾರ ನೀಡಿದರೆ ಮಾತ್ರ ಭವಿಷ್ಯ ಸುರಕ್ಷಿತ ಎಂದರು.
ಭಾವಸಾರ ವಿಜನ್ ಇಂಡಿಯಾದ ನಿರ್ದೇಶಕ ಅಶ್ವಥ್ ಸುಲಾಖೆ ಮಾತನಾಡಿ, ಹಿಂದೂ ಜನಜಾಗೃತಿ ಸಮಿತಿ ಮತ್ತು ಭಾವಸಾರ ವಿಜನ್ ಇಂಡಿಯಾ ಎರಡೂ ಸಂಘಟನೆಗಳು ಧರ್ಮ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿವೆ. ಸನಾತನ ಧರ್ಮದ ಮೌಲ್ಯಗಳನ್ನು ಉಳಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ಎಂದರು.ಸನಾತನ ಸಂಸ್ಥೆಯ ಸಾಧಕಿ ಜಯಶ್ರೀ ಹೆಬಸೂರ ಮಾತನಾಡಿದರು. ಈ ವೇಳೆ ವಿಜಯಾ ಪರಶುರಾಮ ನವಲೆ ದಂಪತಿಗೆ ಸನ್ಮಾನಿಸಲಾಯಿತು. ಭಾವಸಾರ ವಿಜನ್ ಇಂಡಿಯಾ ಅಧ್ಯಕ್ಷ ಶ್ರೀಪಾದ ವೈಕುಂಠೆ ಅಧ್ಯಕ್ಷತೆ ವಹಿಸಿದ್ದರು. ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಪರಶುರಾಮ ಮಹೇಂದ್ರಕರ, ಭಾವಸಾರ ಸಮಾಜ ಟ್ರಸ್ಟ್ ಸದಸ್ಯ ತುಕಾರಾಮ ಬೇಂದ್ರೆ, ಜೆ.ಡಿ. ಉತ್ತರಕರ, ರಾಜೇಂದ್ರ ತ್ರಿಮಲ್ಲೆ, ಈರಣ್ಣ ಬೆಳಮಕರ, ಷಣ್ಮುಖ ಸುಲಾಖೆ, ನಾಗರಾಜ ವಾದೋನೆ, ವೀಣಾ ಸುಲಾಖೆ, ಸುರೇಖಾ ಪಾಟೀಲ, ವಿಜಯಲಕ್ಷ್ಮೀ ದೇಸಾಯಿ, ದ್ಯಾಮಕ್ಕ ಬಸೆಟ್ಟಿ, ಅಕ್ಕಮ್ಮ ಅಬ್ಬಿಗೇರಿ ಸೇರಿದಂತೆ ಇತರರು ಇದ್ದರು. ಭಾಗ್ಯಶ್ರೀ ನವಲೆ ಪ್ರಾರ್ಥಿಸಿದರು. ರಾಘವೇಂದ್ರ ನವಲೆ ಸ್ವಾಗತಿಸಿದರು. ರಾಜು ಕಪಟಕರ ನಿರೂಪಿಸಿದರು. ಸುಧಾ ವೈಕುಂಠೆ ವಂದಿಸಿದರು.