ಸಾರಾಂಶ
ನೀರು ತುಂಬಿದ ಬೆಲೂನುಗಳನ್ನು ಸಿಡಿಸಿ, ಹಾಡಿಗೆ ಹೆಜ್ಜೆ ಹಾಕುತ್ತಾ ಮಂಗಳೂರಿನ ಚೇತನಾ ಶಾಲೆಯ ವಿಶೇಷ ಚೇತನ ಮಕ್ಕಳು ಶುಕ್ರವಾರ ಈ ಬಾರಿಯ ಹೋಳಿ ಸಂಭ್ರಮವನ್ನು ಆಚರಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಬಣ್ಣಗಳನ್ನು ಮುಖಕ್ಕೆ ಹಚ್ಚಿಕೊಂಡು, ನೀರು ತುಂಬಿದ ಬೆಲೂನುಗಳನ್ನು ಸಿಡಿಸಿ, ಹಾಡಿಗೆ ಹೆಜ್ಜೆ ಹಾಕುತ್ತಾ ಮಂಗಳೂರಿನ ಚೇತನಾ ಶಾಲೆಯ ವಿಶೇಷ ಚೇತನ ಮಕ್ಕಳು ಈ ಬಾರಿಯ ಹೋಳಿ ಸಂಭ್ರಮವನ್ನು ಆಚರಿಸಿದರು.ಪ್ರಾರಂಭದಲ್ಲಿ ಪ್ರತಿ ಮಗು ಕೂಡ ತನ್ನ ಕೈಗಳನ್ನು ಬಣ್ಣದ ನೀರಿನಲ್ಲಿ ಅದ್ದಿ ಬಿಳಿ ಹಾಳೆಯ ಮೇಲೆ ಅಚ್ಚನ್ನು ಒತ್ತುತ್ತಾ ಮುಖದಲ್ಲಿ ಅರಳುತ್ತಿದ್ದ ನಗೆಯನ್ನು ಸಂಭ್ರಮಿಸುತ್ತಾ ಕಾರ್ಯಕ್ರಮ ಆರಂಭವಾಯಿತು.
ನಂತರ ಮಕ್ಕಳ ಕೈಗಳಲ್ಲಿ ರಾಸಾಯನಿಕ ರಹಿತ, ಪರಿಸರ ಸ್ನೇಹಿ ಬಣ್ಣಗಳನ್ನು ನೀಡುತ್ತಿದ್ದಂತೆ ಪರಸ್ಪರ ಹಚ್ಚಿ ಖುಷಿಪಟ್ಟರು. ಹಾಡುಗಳಿಗೆ ಮಕ್ಕಳು ಹೆಜ್ಜೆ ಹಾಕುತ್ತಾ, ನೀರಿನ ಬೆಲೂನುಗಳನ್ನು ಎಸೆದು ಅದು ಸಿಡಿಯುತ್ತಿದ್ದಂತೆ ಚಪ್ಪಾಳೆ, ಕೇಕೆಗಳೊಂದಿಗೆ ಹರುಷಪಟ್ಟರು.ವಯಸ್ಸು, ಜಾತಿ, ಭಾಷೆ, ಧರ್ಮದ ಭೇದವಿಲ್ಲದೆ, ಶಿಕ್ಷಕರ ಪ್ರೀತಿ ವಾತ್ಸಲ್ಯದೊಂದಿಗೆ, ಆರೈಕೆ, ಆರೋಗ್ಯದ ಕಾಳಜಿಯೊಂದಿಗೆ ಮಕ್ಕಳಲ್ಲಿ ನೈತಿಕ ಸ್ಥೈರ್ಯ, ಹುಮ್ಮಸ್ಸನ್ನು ನೀಡುತ್ತಾ ಬರುತ್ತಿರುವ ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಚೇತನಾ ಮಕ್ಕಳ ಅಭಿವೃದ್ಧಿ ಕೇಂದ್ರದಲ್ಲಿ ಕಲಿಯುತ್ತಿರುವ ನೂರಕ್ಕೂ ಮಿಕ್ಕಿದ ವಿಶೇಷ ಮಕ್ಕಳಲ್ಲಿ ಹೋಳಿಯ ಸಂಭ್ರಮವನ್ನು ಹೆಚ್ಚಿಸಲು ಯೂತ್ ಆಫ್ ಜಿಎಸ್ ಬಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಯೂತ್ ಆಫ್ ಜಿಎಸ್ ಬಿಯ ಪ್ರಮುಖರು, ಹಿತೈಷಿಗಳು, ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯ ಪ್ರಮುಖರು ಇದ್ದರು.