ಸದೃಢ ದೇಶಕ್ಕೆ ಯುವಜನರು ಸಂಘಟಿತರಾಗಿ: ನ್ಯಾಯಾಧೀಶ ಟಿ.ಪಿ. ಸಿದ್ದರಾಮ

| Published : Jan 17 2024, 01:45 AM IST

ಸಾರಾಂಶ

ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಇದ್ದಾಗ ಉತ್ತಮ ಜೀವನ ಕಟ್ಟಿಕೊಳ್ಳಬಹುದು ಎಂದು ರಾಷ್ಟ್ರೀಯ ಯುವ ದಿನ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನ್ಯಾ. ಸಿದ್ದರಾಮ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ರಾಷ್ಟ್ರದ ಸಂಸ್ಕೃತಿ ಪ್ರಪಂಚಕ್ಕೆ ವಿಸ್ತರಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಯುವಜನರಲ್ಲಿ ಸಶಕ್ತ ಮತ್ತು ಸದೃಢ ದೇಶ ಕಟ್ಟುವ ಶಕ್ತಿ ಇದೆ. ಆದ್ದರಿಂದ ಯುವಜನರು ಸಂಘಟಿತರಾಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಸಿದ್ದರಾಮ ಟಿ.ಪಿ.ಹೇಳಿದರು.

ನಗರದ ಮನಗುಳಿ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಮನಗುಳಿ ಕಾಲೇಜು ಸಹಯೋಗದಲ್ಲಿ ರಾಷ್ಟ್ರೀಯ ಯುವದಿನ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದ ಸಂವಿಧಾನದ ಕಾನೂನುಗಳು ಹಾಗೂ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಇದ್ದಾಗ ಉತ್ತಮ ಜೀವನ ಕಟ್ಟಿಕೊಳ್ಳಬಹುದು. ದೌರ್ಜನ್ಯ, ದಬ್ಬಾಳಿಕೆಯಿಂದ ದೂರವಿರಬಹುದು. ಬಡಜನರಿಗೆ, ದುರ್ಬಲರಿಗೆ, ವಂಚಿತರಾದವರಿಗೆ ನ್ಯಾಯ ಕಲ್ಪಿಸಲು ಉಚಿತ ಕಾನೂನು ಅರಿವು ನೆರವು ಮೂಡಿಸಲಾಗುತ್ತದೆ. ಆ ನಿಟ್ಟಿನಲ್ಲಿ ಅರ್ಹರು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹಿರಿಯ ನ್ಯಾ.ಭಾಸ್ಕರರಾವ್ ಮುಡಬೂಳ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶ ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.

ಪ್ಯಾನಲ್ ವಕೀಲೆ ಪರ್ವೀನ್ ಜಮಖಂಡಿ ಮಾತನಾಡಿ, ಮೂಲಭೂತ ಕಾನೂನಾತ್ಮಕ ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ವಿದ್ಯಾರ್ಥಿ ವೃಂದಕ್ಕೆ ಅತ್ಯಗತ್ಯವಾಗಿದೆ. ತಮ್ಮ ಸುತ್ತಲಿನ ಸಮಾಜ, ಜನರಿಗೆ ಅರಿವು ಮೂಡಿಸುವ ಕಾರ್ಯ ಯುವಶಕ್ತಿಯಿಂದ ನಡೆಯಬೇಕಿದೆ ಎಂದರು.

ಎಸ್.ಎಸ್. ಮನಗುಳಿ ಟ್ರಸ್ಟ್ ಅಧ್ಯಕ್ಷ ಶಿವಪ್ಪ ಮನಗುಳಿ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಶರಣು ಪ್ಯಾಟಿ, ಪಿಎಸ್ಐ ಅಯುರ್ ಖಾನ್, ಕಾಲೇಜು ಪ್ರಾಂಶುಪಾಲ ಪ್ರಭುರಾಜ್ ದೇಶಮುಖ್, ಪ್ಯಾನಲ್ ವಕೀಲ ಮಲ್ಲಪ್ಪ ಕುರಿ ಸೇರಿದಂತೆ ಇತರರಿದ್ದರು.