ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ಗೌರವ ಅರಿಯುವಲ್ಲಿ ಯುವ ಸಂಸತ್‌ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ಗೌರವ ಅರಿಯುವಲ್ಲಿ ಯುವ ಸಂಸತ್‌ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ ಹೇಳಿದರು.

ಪಟ್ಟಣದ ಶ್ರೀ ಸಿದ್ದೇಶ್ವರ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಾಯಕತ್ವ ಗುಣ ಬೆಳೆಸುವ ಯುವ ಸಂಸತ್ತಿನಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದರು.

ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ ಮಾತನಾಡಿ, ದೇಶ, ರಾಜ್ಯದಲ್ಲಿನ ಸಮಸ್ಯೆಗಳನ್ನು ಆಡಳಿತ ಮತ್ತು ವಿರೋಧ ಪಕ್ಷಗಳು ಚರ್ಚೆ ಮೂಲಕ ಹೇಗೆ ಬಗೆಹರಿಸುತ್ತವೆ ಎಂಬುದನ್ನು ಯುವ ಸಂಸತ್ ಮಾದರಿಯಾಗಿದೆ. ವಿದ್ಯಾರ್ಥಿಗಳು ಉತ್ತಮ ನಾಯಕರಾಗಬಹುದು, ಸಂಸತ್ತು ಮತ್ತು ವಿಧಾನಸಭಾ ಕಲಾಪಗಳ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ ಎಂದು ವಿದ್ಯಾರ್ಥಿಗಳ ಸಂಸತ್ ಕಾರ್ಯಕ್ರಮಕ್ಕೆ ಅಭಿನಂದಿಸಿದರು.ಸ್ಥಳೀಯ ಸಂಸ್ಥೆಯ ಅಧ್ಯಕ್ಷ ವ್ಹಿ.ಕೆ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಯುವ ಸಂಸತ್ತು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೂ ಮುಂಚೆ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಅಣುಕು ಸಂಸತ್ತು ಎಲ್ಲರ ಗಮನ ಸೆಳೆಯಿತು. ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಗಳ ದುರಸ್ತಿ, ರಸ್ತೆ, ಬಸ್, ಬರಗಾಲ, ನಗರಾಭಿವೃದ್ಧಿ, ಶಿಕ್ಷಣ, ಸೈಬರ್ ಕ್ರೈಂ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ಗಂಭೀರ ಚರ್ಚೆಗಳ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು.ಮುಖ್ಯಮಂತ್ರಿ ಒಬ್ಬರನ್ನು ಬಿಟ್ಟು ಎಲ್ಲಾ ಸಚಿವರು, ಸಭಾಧ್ಯಕ್ಷರು ಹಾಗೂ ಪ್ರತಿನಿಧಿಗಳು ಮಹಿಳೆಯರೇ ಆಗಿದ್ದು ಯುವ ಸಂಸತ್ ಅಧಿವೇಶನದ ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ತಾಪಂ ಇಒ ಭಾರತಿ ಚಲುವಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ, ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಪಿ.ಎಂ.ಪರಗುಂಡ, ಬಿಆರ್‌ಸಿ ಐ.ಸಿ.ಟಕ್ಕೆ, ಸಿಆರ್‌ಸಿ ಎಸ್.ಎಂ.ಕಪನಿಂಬರಗಿ ಸೇರಿದಂತೆ ತಾಲೂಕಿನ ಶಾಲಾ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಕೆ.ಪಿ.ಮಾಲಿಪಾಟೀಲ ನಿರೂಪಿಸಿ, ವಂದಿಸಿದರು.